ಸಮುದ್ರದಾಳದಲ್ಲಿ ಸಪ್ತಪದಿ..!
ಚೆನ್ನೈ: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಮ್ಮ ಮದುವೆ ಹೀಗೇ ಆಗಬೇಕೆಂದು ಅದೆಷ್ಟೋ ಜನ ಕನಸು ಕಂಡಿರುತ್ತಾರೆ. ಜೀವಮಾನವಿಡೀ ನೆನಪಿಡುವಂತೆ ಮದುವೆ ಮಾಡಿಕೊಳ್ಳಬೇಕೆನ್ನುವುದು ಎಲ್ಲರ ಬಯಕೆ. ಅದರಂತೆ ಚೆನ್ನೈನ ಜೋಡಿಯೊಂದು ವಿಭಿನ್ನವಾಗಿ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚೆನ್ನೈ ಬಳಿಯ ನೀಲಕರಣಿಯಲ್ಲಿ 60 ಅಡಿ ಸಮುದ್ರದಾಳದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಈ ಮದುವೆಗಾಗಿ ಜೊಡಿ ಸಮಾರು ತಿಂಗಳುಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆನ್ನಲಾಗಿದೆ. ಸಮುದ್ರದಾಳದಲ್ಲಿ ವಿವಾಹವಾಗುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಮೊದಮೊದಲು ನಾನು ಭಯಭೀತಳಾಗಿದ್ದೆ. ಆದರೆ ಕ್ರಮೇಣ ಸೂಕ್ತ ತರಬೇತಿಯ ನಂತರ ಇಂದು ಭಯವಿಲ್ಲದೇ ನೀರಿನಾಳಕ್ಕೆ ಧುಮುಕಿದೆ. ಇದು ನನ್ನ ಜೀವಮಾನದ ಸುಂದರ ಕ್ಷಣ ಎಂದು ವಧು ಶ್ವೇತಾ ಹೇಳಿದ್ದಾರೆ. ನನ್ನ ಪತ್ನಿ ಮೊದಮೊದಲು ತುಂಬಾ ಹಿಂಜರಿಯುತ್ತಿದ್ದಳು. ಆದರೆ ಸ್ಕೂಬಾ ತರಬೇತುದಾರರಿಂದ ತಿಂಗಳುಗಟ್ಟಲೇ ತರಬೇತಿ ಪಡೆದ ನಂತರ ಭಯ ಕಡಿಮೆಯಾಗಿತ್ತು. ನಾನು ಮೊದಲಿನಿಂದಲು ಈಜುಗಾರ ಹೀಗಾಗಿ ನನಗೆ ಅಂಥ ಕಷ್ಟವನಿಸಲಿಲ್ಲ. ಸಮುದ್ರದಾಳದಲ್ಲಿ ಸಪ್ತಪದಿ ತುಳಿಯಬೇಕೆನ್ನುವುದು ನನ್ನ ಕನಸಾಗಿತ್ತು. ಇಂದು ಸುಮಾರು 45 ನಿಮಿಷಗಳ ಕಾಲ ಸಮುದ್ರದಾಳದಲ್ಲಿ ಸಮಯ ಕಳೆದು ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ವರ ಚಿನ್ನದೊರೈ ಮಾತನಾಡಿದ್ದಾರೆ. ವಧು ವರರಿಬ್ಬರೂ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ಸಂಬಂಧಿಕರು ಸಮುದ್ರ ಕಿನಾರೆಯಲ್ಲಿ ಬೀಡು ಬಿಟ್ಟಿದ್ದರೆನ್ನಲಾಗಿದೆ.