ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಭರ್ಜರಿ ಗಿಫ್ಟ್ ದೊರೆತಿದೆ. ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಯೋಜನೆಗಳನ್ನು ಪ್ರಕಟಿಸಲಾಗಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿನ ಹೆದ್ದಾರಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆ.
ಕೇರಳದಲ್ಲಿ 1100ಕಿ.ಮೀ., ತಮಿಳುನಾಡಿನಲ್ಲಿ 3500 ಕಿ.ಮೀ., ಮತ್ತು ಪಶ್ಚಿಮ ಬಂಗಾಳದಲ್ಲಿ 700 ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ಬಂಪರ್ ಗಿಫ್ಟ್ ದೊರೆತಿದೆ. ರಸ್ತೆ ಅಭಿವೃದ್ಧಿಗೆ ಕೇರಳಕ್ಕೆ 65 ಸಾವಿರ ಕೋಟಿ ರೂ., ಪಶ್ಚಿಮ ಬಂಗಾಳಕ್ಕೆ 65 ಸಾವಿರ ಕೋಟಿ ರೂ. ಅನುದಾನ ದೊರೆತಿದೆ. ಅಲ್ಲದೇ, ಅಸ್ಸಾಂನಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1,300 ಕಿ.ಮೀ.ಗಳಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸುವ ಗುರಿಯಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಕಾಗದರಹಿತ ಬಜೆಟ್ ಮಂಡನೆಯಾಗುತ್ತಿದೆ. ಲಾಕ್ಡೌನ್ ನಂತರ ಪ್ರಧಾನಿ ಮೋದಿ ಅವರು ಪ್ರಕಟಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮತ್ತು ಆತ್ಮನಿರ್ಭರ್ ಯೋಜನೆ ಮಿನಿ ಬಜೆಟ್ ಇದ್ದಂತೆ ಎಂದು ಬಜೆಟ್ ಗೂ ಮುನ್ನ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.