ಮೂರನೇ ಬಾರಿ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್: ಭಾರೀ ನಿರೀಕ್ಷೆಯಲ್ಲಿ ಜನತೆ

ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ 2021-22 ರ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಭಾರೀ ನಿರೀಕ್ಷೆಯಲ್ಲಿದ್ದಾರೆ. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಮೂರನೇ ಬಜೆಟ್ ಆಗಿದ್ದು, ಕರ್ನಾಟಕಕ್ಕೆ ಏನೇನು ಸಿಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಲಿದೆ. ಅಲ್ಲದೇ, ಕೋವಿಡ್-19 ಹಿನ್ನೆಲೆ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಯಾವ್ಯಾವ ವಲಯಕ್ಕೆ ಏನೇನು ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ರಾಷ್ಟ್ರಪತಿಗಳು ಎರಡೂ ಸದನಗಳನ್ನುದ್ದೇಶಿಸಿ ಮಾತನಾಡಿದ ಬಳಿಕ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ನೆಲಕಚ್ಚಿದ್ದ ಚಟುವಟಿಕೆಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ದೇಶದ ಆರ್ಥಿಕತೆಯನ್ನು ಮತ್ತಷ್ಟು ಸುಧಾರಿಸಲು ಮತ್ತು ಎಲ್ಲ ವಲಯಗಳನ್ನು ಆರ್ಥಿಕವಾಗಿ ಸುಧಾರಿಸಲು ಯಾವೆಲ್ಲ ವಲಯಗಳಿಗೆ ಎಷ್ಟೆಷ್ಟು ಬಂಡವಾಳ ಮೀಸಲಿಡಲಾಗಿದೆ ಎಂಬ ಕುತೂಹಲವೂ ಜನಸಾಮಾನ್ಯರಿಗಿದೆ. ಇನ್ನು, ಉತ್ಪಾದನಾ ವಲಯಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುವ ಸಾಧ್ಯತೆ ಇದೆ ಎಂಬ ಮಾತುಗಳೂ ಉದ್ಯಮ ವಲಯದಲ್ಲಿ ಕೇಳಿಬರುತ್ತಿವೆ. ಈ ಬಾರಿಯ ಬಜೆಟ್ ಕೊರೋನಾದಿಂದ ಪೆಟ್ಟು ತಿಂದಿರುವ ಆರ್ಥಿಕತೆಯ ಸುಧಾರಣೆಗೆ ಏನೆಲ್ಲ ಕೊಡುಗೆ ನೀಡಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.