ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ದೇಶದಲ್ಲಿರುವ ಮೆಟ್ರೋ ಜಾಲಗಳಿಗೆ ಅನುದಾನ ಘೋಷಣೆಯಾಗಿದೆ. ಅಲ್ಲದೇ, ಭಾರತೀಯ ರೈಲ್ವೇ ಇಲಾಖೆಯನ್ನೂ ಮೇಲ್ದರ್ಜೆಗೆ ಏರಿಸುವ ಗುರಿ ಕೇಂದ್ರ ಸರ್ಕಾರಕ್ಕಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬೆಂಗಳೂರಿನ ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿಗೆ ಅನುದಾನ ಘೋಷಣೆಯಾಗಿದೆ. ಈ ನೂತನ ಯೋಜನೆಗೆ ಒಟ್ಟು 14,788 ಕೋಟಿ ರೂ. ಬಿಡುಗಡೆಯಾಗಿದೆ. ಚೆನ್ನೈ ಮತ್ತು ಕೊಚ್ಚಿ ಮೆಟ್ರೋದ ಎರಡನೇ ಫೇಸ್ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿದೆ. ಇನ್ನು, ಭಾರತೀಯ ರೈಲ್ವೇ ಇಲಾಖೆಯ ಉನ್ನತೀಕರಣಕ್ಕೆ ಯೋಜನೆಗಳನ್ನು ಘೋಷಿಸಲಾಗಿದೆ. ದೇಶದಲ್ಲಿ ರೈಲ್ವೇ ಸಂಪರ್ಕ ಜಾಲವಿಲ್ಲದ ಪ್ರದೇಶಗಳಲ್ಲಿ ರೈಲ್ವೇ ಲೈನ್ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ರೈಲ್ವೇ ಮಿಷನ್ 2030 ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಅನುದಾನವನ್ನು ಘೋಷಣೆ ಮಾಡಲಾಗಿದೆ.
ಸ್ವಯಂಚಾಲಿತ ರೈಲಿಗೆ ಕೇಂದ್ರ ಸರ್ಕಾರದ ಆದ್ಯತೆ ಇದೆ. 46,000 ಕಿ.ಮೀ. ರೈಲುಮಾರ್ಗವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. 2023ರ ವೇಳೆಗೆ ಬ್ರಾಡ್ಗೇಜ್ ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುದೀಕರಣ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಡಿಜಿಟಲ್ ಬಜೆಟ್ ಮಂಡನೆಯಾಗುತ್ತಿದೆ. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಮೂರನೇ ಬಜೆಟ್ ಆಗಿದೆ.