ತ್ರಿವಳಿ ತಲಾಖ್ ನೀಡಿದರೂ ಪತ್ನಿ ಮನೆಯನ್ನು ತೊರೆಯದ ಕಾರಣ ಅಸಮಾಧಾನಗೊಂಡ ಪತಿ7 ವರ್ಷದ ಮಗಳನ್ನು ಕೊಲ್ಲಲು ಪಕ್ಕದ ಮನೆಯವನಿಗೆ ಸುಪಾರಿ ನೀಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಲಾಖ್ ನೀಡಿದರೂ ಮದುವೆ ಸಂಬಂಧ ಮುರಿದುಕೊಳ್ಳಲು ಬಯಸದ ಪತ್ನಿ ಮನೆ ತೊರೆಯಲಿಲ್ಲ. ಇದರಿಂದ ಪತ್ನಿಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಪತಿ ಸುಪಾರಿ ಕೊಟ್ಟು ಮಗಳನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಮಗಳನ್ನು ಕೊಲ್ಲಬೇಕಾದರೆ ಎರಡು ದಿನ ಮದ್ಯಪಾನ ಮಾಡಲು 8000 ನೀಡುವಂತೆ ಪಕ್ಕದ ಮನೆಯವನು ಬೇಡಿಕೆ ಇಟ್ಟಿದ್ದ. ಬುಲೆಂಡ್ ಶೇರ್ ಗ್ರಾಮದಲ್ಲಿ ಎರಡು ದಿನಗಳ ನಂತರ 7 ವರ್ಷದ ಪುತ್ರಿ ಸಾಬಾಳ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿತ್ತು.
ತಾಯಿ ಶಬನಮ್ ಮಗಳ ಸಾವಿನ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಪತಿ ಹಾಗೂ ನೆರೆಮನೆಯನ ವಿರುದ್ಧ ದೂರು ನೀಡಿದ್ದು, ಪೊಲೀಸರು ಕೊಲೆಗೆ ಸಹಾಯ ಮಾಡಿದ್ದ ಮತ್ತೊಬ್ಬ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಶಬನಮ್ ನನ್ನು 2010ರಲ್ಲಿ ಮುಸಾಫಿರ್ ಮದುವೆ ಆಗಿದ್ದು, ನಾಲ್ಕು ವರ್ಷಗಳ ನಂತರ ಮತ್ತೊಬ್ಬಳನ್ನು ಮದುವೆ ಆಗಲು ತ್ರಿವಳಿ ತಲಾಖ್ ನೀಡಿದ್ದ. ಆದರೆ ಪತ್ನಿ ಮನೆಯಿಂದ ಹೊರಗೆ ಹೋಗಲು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಮುಸಾಫಿರ್ 2018ರಲ್ಲಿ ಪತ್ನಿಯ ಮೇಲೆ ಆಸಿಡ್ ದಾಳಿ ಮಾಡಿದ್ದ. ಇದೀಗ ಮಗಳನ್ನು ಕೊಂದು ಅದರ ಹೊಣೆಯನ್ನು ಪತ್ನಿ ಮೇಲೆ ಹಾಕಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.