ಚಮೋಲಿ: ಜೋಶಿಮಠದ ತಪೋವನ್ ಬಳಿ ನಡೆದ ಹಿಮಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 61ಕ್ಕೇರಿದೆ. ತಪೋವನ ಸುರಂಗದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ನಾಪತ್ತೆಯಾದವರನ್ನು ಹುಡುಕುವಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ತುರ್ತು ಪರಿಸ್ಥಿತಿಗಳಲ್ಲಿ ಎಚ್ಚರಿಕೆ ನೀಡಲು ರೈನಿ ಗ್ರಾಮದಲ್ಲಿ ವಾಟರ್ ಸೆನ್ಸರ್ ಎಚ್ಚರಿಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು, ದುರ್ಘಟನೆಯಲ್ಲಿ ನಾಪತ್ತೆಯಾದವರ ಕುಟುಂಬಸ್ಥರು ಸ್ಥಳದಲ್ಲಿಯೇ ಬಿಡಾರ ಹೂಡಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೂ ಒಟ್ಟು 61 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 160 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಐಟಿಬಿಪಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು 5ನೇ ದಿನವೂ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮಾಹಿತಿ ನೀಡಿದೆ.
ಇನ್ನು ಪ್ರವಾಹಕ್ಕೆ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಲು ಉತ್ತರಾಖಂಡ ಸರ್ಕಾರ ಇಲಾಖೆಯನ್ನು ರಚಿಸಲಿದೆ ಎಂದು ಉತ್ತರಾಖಂಡ ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ. ಚಮೋಲಿ ದುರ್ಘಟನೆಗೆ ಸಂಬಂಧಿಸಿದಂತೆ ಪ್ರತಿ ಕೋನಗಳಿಂದ ತನಿಖೆಯನ್ನು ಮಾಡಬೇಕು ಎಂದು ಹೇಳಿದ್ದಾರೆ. ಎಲ್ಲಾ ಹಿಮ ಪರ್ವತಗಳನ್ನು ಉಪಗ್ರಹದ ಮೂಲಕ ಮೇಲ್ವಿಚಾರಣೆ ಮಾಡಲು ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡಲು ನಾವು ನಮ್ಮ ಸಚಿವಾಲಯದಲ್ಲಿ ಒಂದು ಇಲಾಖೆಯನ್ನು ರಚಿಸುತ್ತೇವೆ ಎಂದು ಮಹಾರಾಜ್ ಹೇಳಿದ್ದಾರೆ.