ಚಮೋಲಿ: ಜೋಷಿಮಠದ ಬಳಿ ನಡೆದ ಮೇಘಸ್ಫೋಟ ದುರಂತದಲ್ಲಿ ಇದುವರೆಗೂ 28 ಜನ ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ತಪೋವನ ಜಲಶಕ್ತಿ ಯೋಜನೆಯ ಸುರಂಗದಲ್ಲಿ 30ಕ್ಕಿಂತಲೂ ಅಧಿಕ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇವರ ರಕ್ಷಣೆ ಹೊತ್ತು ಕಳೆದಂತೆ ಕಠಿಣವಾಗುತ್ತಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಭಾರತೀಯ ಸೇನೆ ಸುರಂಗದಲ್ಲಿರುವವರ ರಕ್ಷಣೆಗೆ ಹರಸಾಹಸ ಪಡುತ್ತಿದೆ. ಸುರಂಗದಲ್ಲಿ ತಾಪಮಾನ 2 ಡಿಗ್ರಿಗಿಂತಲೂ ಕಡಿಮೆಯಿದೆ. ಹೀಗಾಗಿ ಅಲ್ಲಿ ಸಿಲುಕಿರುವವರನ್ನು ಆದಷ್ಟು ಬೇಗ ರಕ್ಷಿಸದಿದ್ದರೆ ಅನಾಹುತ ಆಗಲಿದೆ. ಸುರಂಗದಲ್ಲಿ ಕೆಸರು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ. ಕೆಸರನ್ನು ತೆರವುಗೊಳಿಸುವಲ್ಲಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲಿ ಸಿಲುಕಿರುವವರನ್ನು ರಕ್ಷಿಸುವಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರ್ಮಿಕರು 12 ಅಡಿ ಎತ್ತರ ಮತ್ತು ಸುಮಾರು 2.5 ಕಿ.ಮೀ ಉದ್ದದ ಸುರಂಗದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಅಹೋರಾತ್ರಿ ಕಾರ್ಯಾಚರಣೆ ಸಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಟಿ ಆರ್ ಎಫ್ ತಂಡಗಳ ನೂರಾರು ಸಿಬ್ಬಂದಿಗಳು ರಾತ್ರಿಯಿಡೀ ಅವಶೇಷಗಳು ಮತ್ತು ಕೆಸರನ್ನು ತೆರವುಗೊಳಿಸುತ್ತಿದ್ದಾರೆ. ಖಾಸಗಿ ಮತ್ತು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳು ಹಿಮಸ್ಫೋಟ ಪೀಡಿತ ಪ್ರದೇಶಗಳಲ್ಲಿ ಸುಮಾರು 100 ಪಡಿತರ ಕಿಟ್‌ಗಳನ್ನು ವಿತರಿಸಿವೆ.