ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಗೆ ದಿನಗಣನೆ ಆರಂಭವಾಗಿದೆ. ಇದಕ್ಕೆಂದು ಗಿಫ್ಟ್ ಹಾಗೂ ಗುಲಾಬಿ ಹೂ ಮಾರಾಟಗಾರರು ಭರ್ಜರಿಯಾಗಿ ಸಿದ್ಧರಾಗುತ್ತಿದ್ದಾರೆ. ತಮ್ಮ ಸಂಗಾತಿಗೆ ವಿಶೇಷ ಉಡುಗೊರೆ ನೀಡಲು ಹಲವು ಪ್ರೇಮಿಗಳು ಕೆಂಪು ಗುಲಾಬಿಯ ಮೊರೆ ಹೋಗುತ್ತಾರೆ. ಹೀಗಾಗಿ ವ್ಯಾಪಾರಿಗಳು ಗುಣಮಟ್ಟದ ಗುಲಾಬಿ ಹೂಗಳನ್ನು ರೈತರಿಂದ ಖರೀದಿಸುತ್ತಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗುಣಮಟ್ಟದ ಕೆಂಪು ಗುಲಾಬಿ ಹೂಗಳ ಉತ್ಪಾದನೆಯಲ್ಲಿ ಕುಸಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ವರ್ಷ ಪ್ರತಿ ಗುಲಾಬಿಗೆ 7 ರೂ. ನೀಡಬೇಕಿತ್ತು. ಈ ಬಾರಿ ಇನ್ನೂ ದರ ನಿಗದಿಯಾಗಿಲ್ಲ. ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಗುಲಾಬಿಗಳು ಉತ್ಪಾದನೆಯಾಗುವುದರಿಂದ ಮುಂಬೈ, ಕೊಲ್ಕತ್ತಾ, ಚೆನ್ನೈ ಸೇರಿದಂತೆ ದೇಶದ ಬಹುತೇಕ ನಗರಗಳಿಗೆ ಇಲ್ಲಿಂದಲೇ ಗುಲಾಬಿಗಳು ರವಾನೆಯಾಗುತ್ತವೆ.
ಗುಲಾಬಿಗಳನ್ನು ಹೊರತುಪಡಿಸಿಯೂ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಉಡುಗೊರೆಗಳು ಕಾಣಸಿಗುತ್ತಿವೆ. ಅದರಲ್ಲೂ ಈ ಬಾರಿಯ ಪ್ರೇಮಿಗಳ ದಿನ ವಾರಾಂತ್ಯ ಬಂದಿರುವುದರಿಂದ ಪ್ರೇಮಿಗಳು ಆಚರಣೆಗೆ ಸಜ್ಜಾಗುತ್ತಿದ್ದಾರೆ.