ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾಗಿದ್ದಾರೆ. ದೋಹಾದಿಂದ ಪ್ರಯಾಣಿಕರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನದ ರೆಕ್ಕೆ ಲ್ಯಾಂಡಿಂಗ್ ಸಮಯದಲ್ಲಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದಿದೆ. ತಕ್ಷಣಕ್ಕೆ ಎಮರ್ಜೆನ್ಸಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ತಾಂತ್ರಿಕ ತಂಡ ನೆರವಿಗೆ ಧಾವಿಸಿದೆ. ಲ್ಯಾಂಡಿಂಗ್ ಸಮಯದಲ್ಲಿ ಸಣ್ಣದಾಗಿ ಶಬ್ದ ಕೇಳಿತು. ಗಾಬರಿಗೊಳಗಾಗದಂತೆ ತಕ್ಷಣಕ್ಕೆ ಪೈಲಟ್ ಪ್ರಯಾಣಿಕರಿಗೆ ಮನವಿ ಮಾಡಿದರು ಎಂದು ಪ್ರಯಾಣಿಕರೊಬ್ಬರು ಮಾತನಾಡಿದ್ದಾರೆ.

ರನ್‌ವೇನಲ್ಲಿ ಇಳಿಯುವಾಗ ಮಧ್ಯಭಾಗದ ಹಳದಿ ಪಟ್ಟೆಯಲ್ಲಿ ಇಳಿಯುವ ಬದಲು ವಿಮಾನದ ಕ್ಯಾಪ್ಟನ್ ಅಂಚಿನಲ್ಲಿನ ಹಳದಿ ಪಟ್ಟಿಯಲ್ಲಿ ಇಳಿಸಿದ್ದರು. ಇದರ ಪರಿಣಾಮ ರನ್‌ವೇ ಪಕ್ಕದಲ್ಲಿದ್ದ ಅಧಿಕ ತೀವ್ರತೆ ಬೆಳಕಿಗಾಗಿ ಸ್ಥಾಪಿಸಲಾದ ಕಂಬಕ್ಕೆ ವಿಮಾನದ ರೆಕ್ಕೆ ಡಿಕ್ಕಿಯಾಗಿದೆ. ಆ ರಭಸಕ್ಕೆ ಕಂಬ ಧರೆಗುಳಿದಿದೆ. ರೆಕ್ಕೆಗೆ ಸಣ್ಣಪ್ರಮಾಣದಲ್ಲಿ ಹಾನಿಯಾಗಿದೆ ಎಂದು ವಿಜಯವಾಡ ವಿಮಾನ ನಿಲ್ದಾಣದ ಮೂಲಗಳು ಮಾಹಿತಿ ನೀಡಿವೆ.