ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೊನೆಗೂ ಜಾಮೀನು ಲಭಿಸಿದೆ. ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಧಾರವಾಡಕ್ಕೆ ತೆರಳದಂತೆ ಸೂಚನೆ ನೀಡಿದೆ.
ವಿನಯ್ ಕುಲಕರ್ಣಿ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದು ಅಥವಾ ಸಾಕ್ಷಿ ನಾಶ ಮಾಡಲು ಯತ್ನಿಸಿದರೆ ಜಾಮೀನು ಅರ್ಜಿಯನ್ನು ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಗೌಡರ್ ಅವರನ್ನು 2016ರ ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್ನ ಹೊರಗೆ ಸುಪಾರಿ ಹಂತಕರು ಮೊದಲಿಗೆ ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಬೈಕ್ನಲ್ಲಿ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಧಾರವಾಡದ 6 ಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಬಳಿಕ 2019ರ ಸೆಪ್ಟೆಂಬರ್ನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2020ರ ನವೆಂಬರ್ 5ರಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಪೀಠ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.