ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಆಗಿದ್ದರೂ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು ಕೂಡ ಬಿಡುಗಡೆ ಆಗುವುದು ಅನುಮಾನವಾಗಿದೆ.
ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿನಯ ಕುಲಕರ್ಣಿ ಗೆ ಗುರುವಾರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಗುರುವಾರ ಸಂಜೆ ಜೈಲಿನಿಂದ ಹೊರಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜಾಮೀನು ಮಂಜೂರು ಆಗಿದ್ದರೂ ವಿನಯ್ ಶುಕ್ರವಾರ ಕೂಡ ಜೈಲಿನಿಂದ ಹೊರಬರುವುದು ಅನುಮಾನವಾಗಿದೆ.
2020ರ ನವೆಂಬರ್ 5ರಂದು ಹಿಂಡಲಗಾ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ನಿನ್ನೆಯಷ್ಟೇ ವಿನಯ್ ಕುಲಕರ್ಣಿಗೆ ಜಾಮೀನು ನೀಡಲಾಗಿತ್ತು. ಸಂಜೆ 6 ಗಂಟೆ ಒಳಗೆ ಕೋರ್ಟ್ ಆದೇಶದ ಪ್ರತಿ ಸಿಗದ ಹಿನ್ನಲೆಯಲ್ಲಿ ಜಾಮೀನು ಸಿಕ್ಕರು ಜೈಲಿನಲ್ಲಿ ಕಳೆಯುವಂತಾಗಿತ್ತು
ಕೋರ್ಟ್ ಆದೇಶ ಪ್ರತಿ ಇಮೇಲ್ ಮಾಡದೇ, ಪೋಸ್ಟ್ ಮೂಲಕ ಆದೇಶ ಪ್ರತಿಯನ್ನು ನ್ಯಾಯಾಲಯ ಕಳುಹಿಸಿದ್ದು, ಕೋರ್ಟ್ ಆದೇಶ ಪ್ರತಿಯನ್ನು ವಕೀಲರು ಖುದ್ದಾಗಿ ನೀಡಿದ ನಂತರವೇ ವಿನಯ್ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ.
ಜೈಲಿನ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ ವಿನಯ್ ಕುಲಕರ್ಣಿ ಬಿಡುಗಡೆ ಆಗಲಿದ್ದು, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ ಪೋಸ್ಟ್ ಮೂಲಕ ಬರಬೇಕಿರುವ ಆದೇಶ ಪ್ರತಿ ವಿಳಂಬ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.