ಮೀರತ್: ಪ್ರಾಧ್ಯಾಪಕರೊಬ್ಬರು ಎಂ.ಫಿಲ್ ಆಕಾಂಕ್ಷಿ ಯುವತಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದಾರೆ. ಮೀರತ್ನಲ್ಲಿರುವ ಚೌಧರಿ ಚರಣಸಿಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಮಾಡಿದ ಚಾಟ್ ಎಲ್ಲೆಡೆ ಹರಿದಾಡುತ್ತಿದೆ. ‘ನಿನ್ನ ಮೂಗು ತುಂಬಾ ಸುಂದರವಾಗಿದೆ. ನಿನ್ನ ನೀಳ ಮೂಗಿಗೆ ಎಲ್ಲರೂ ಆಕರ್ಷಿತರಾಗುತ್ತಾರೆ. ನಿನ್ನಂಥ ಸುಂದರ ಯುವತಿಯ ಸ್ನೇಹವನ್ನು ನಿರಾಕರಿಸಲು ಹೇಗೆ ಸಾಧ್ಯ? ನೀನು ದಪ್ಪವಿದ್ದರೂ ಆಕರ್ಷಕವಾಗಿ ಕಾಣುತ್ತೀ! ನಿನ್ನ ಡಿಪಿ ಬದಲಾಯಿಸು. ನೀನು ಒಂಚೂರು ಸಣ್ಣಗಾದರೆ ಇನ್ನೂ ಸುಂದರವಾಗಿ ಕಾಣುತ್ತೀ’ ಎಂದು ಪ್ರಾಧ್ಯಾಪಕ ಮೆಸೇಜ್ ಮಾಡಿದ್ದಾನೆ.
ಅವಿವಾಹಿತ ಪ್ರೊಫೆಸರ್ ಎಂ.ಫಿಲ್ ಆಕಾಂಕ್ಷಿಯೊಂದಿಗೆ ಚಾಟ್ ಮಾಡುತ್ತಿದ್ದ ಎನ್ನಲಾಗಿದೆ. ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ಸಲಹೆಯನ್ನು ಕೇಳುತ್ತಿದ್ದ ವಿದ್ಯಾರ್ಥಿಯೊಂದಿಗೆ ಈ ರೀತಿಯಾಗಿ ಮೆಸೇಜ್ ಮಾಡಿದ್ದಾನೆ ಎನ್ನಲಾಗಿದೆ.
ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಬಾಲಾಜಿ ಅವರು ಈ ಬಗ್ಗೆ ತನಿಖೆ ನಡೆಸಿ ಏಳು ದಿನಗಳಲ್ಲಿ ಸಿಸಿಎಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ ಪ್ರತಿಕ್ರಿಯೆ ಕೋರಿದ್ದಾರೆ. ಸದರಿ ಪ್ರೊಫೆಸರ್ ಈ ವಿಷಯವನ್ನು ಮುಚ್ಚಿಹಾಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಮತ್ತು ಅದರ ರೆಕಾರ್ಡಿಂಗ್ ಅನ್ನು ಹೊಂದಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.