ಖಿನ್ನತೆಯೊಂದಿಗೆ ಕಠಿಣ ಹೋರಾಟ ನಡೆಸಿದ್ದೆ: ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದೆ. ಆ ಸಮಯದಲ್ಲಿ ಜಗತ್ತಿನಲ್ಲಿ ನಾನೊಬ್ಬನೇ ಒಂಟಿತನದ ವ್ಯಕ್ತಿ ಎಂಬ ಭಾವನೆ ಉಂಟಾಗಿತ್ತು. ಆ ಸಮಯದಲ್ಲಿ ಖಿನ್ನತೆಯೊಂದಿಗೆ ಕಠಿಣ ಹೋರಾಟ ನಡೆಸಿದ್ದೆ ಎಂದು ವಿರಾಟ್ ಹೇಳಿದ್ದಾರೆ. ಏಳು ವರ್ಷಗಳ ಹಿಂದೆ ಖಿನ್ನತೆಯ ಸಮಸ್ಯೆಯನ್ನು ಎದುರಿಸಿದ್ದೆ. ಒಬ್ಬಂಟಿ ಎಂಬ ಭಾವನೆ ನನ್ನನ್ನು ಗಾಢವಾಗಿ ಆವರಿಸಿತ್ತು.
ಆ ಸಮಯದಲ್ಲಿ ಯಾರೊಂದಿಗೆ ಏನು, ಹೇಗೆ ಮಾತನಾಡಬೇಕು ಎನ್ನುವುದು ಸಹ ನನಗೆ ತಿಳಿಯುತ್ತಿರಲಿಲ್ಲ. ಎಲ್ಲರಿಂದಲೂ ದೂರವಿರಲು ಬಯಸುತ್ತಿದ್ದೆ. ಆ ಸಮಯದಲ್ಲಿ ನಾನು ಅನುಭವಿಸಿದ ಯಾತನೆ ಹೇಳಿದರೆ ಅರ್ಥವಾಗುವಂಥದ್ದಲ್ಲ. ನನ್ನ ಮನಸ್ಸಿನಲ್ಲಿ ಉಂಟಾಗುತ್ತಿದ್ದ ಭಾವನೆಗಳನ್ನು ನಿಯಂತ್ರಿಸುವಲ್ಲಿ ನಾನು ವಿಫಲನಾಗುತ್ತಿದ್ದೆ. ರನ್ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದಾಗ ಮಾನಸಿಕವಾಗಿ ಎಲ್ಲ ಬ್ಯಾಟ್ಸ್ಮನ್ಗಳು ಕುಗ್ಗಿ ಹೋಗುವುದು ಸಹಜ ಎಂದು ವಿರಾಟ್ ಕೊಹ್ಲಿ ತಮ್ಮ ಹಳೆಯ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಐದು ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 1,8,25,0,39,28,0,7,6,20 ರನ್ಗಳನ್ನು ಗಳಿಸಿದ್ದರು. ಒಟ್ಟು 10 ಇನ್ನಿಂಗ್ಸ್ಗಳಲ್ಲಿ 13.40 ಸರಾಸರಿಯಲ್ಲಿ ಕೊಹ್ಲಿ ರನ್ ಗಳಿಸಿದ್ದರು. ಈ ಪಂದ್ಯದ ಬಳಿಕ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ 692 ರನ್ ಗಳಿಸಿ ಫಾರ್ಮ್ಗೆ ಮರಳಿದ್ದರು. ಆ ಸಮಯದಲ್ಲಿ ನಿದ್ರೆಗೆ ಜಾರುವುದೂ ನನಗೆ ಕಷ್ಟವಾಗುತ್ತಿತ್ತು. ನನ್ನ ಮೇಲೆ ನನಗೆ ವಿಶ್ವಾಸವಿರಲಿಲ್ಲ. ಏನು ಮಾಡಬೇಕು ಎಂಬುದು ತಿಳಿಯುತ್ತಿರಲಿಲ್ಲ. ಆ ಸಮಯದಲ್ಲಿ ವೃತ್ತಿಪರರ ಸಹಾಯ ನನಗೆ ಅಗತ್ಯವಿದೆ ಎಂದು ಅನಿಸಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.