ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.
ಈ ಮೂಲಕ ಐಪಿಎಲ್ ಎರಡನೇ ಹಂತದ ಮೊದಲ ಪಂದ್ಯಕ್ಕೂ ಹಿಂದಿನ ದಿನ ಬೆಂಗಳೂರಿನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಭಾರತ ಟಿ-20 ತಂಡದ ನಾಯಕ ಸ್ಥಾನವನ್ನು ಮುಂಬರುವ ಟಿ-20 ವಿಶ್ವಕಪ್ ನಂತರ ತ್ಯಜಿಸುವುದಾಗಿ ಘೋಷಿಸಿದ್ದ ವಿರಾಟ್ ಕೊಹ್ಲಿ, ಇದೀಗ ಐಪಿಎಲ್ ನಲ್ಲೂ ನಾಯಕ ಸ್ಥಾನವನ್ನು ಪದತ್ಯಾಗ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಆರ್ ಸಿಬಿ ತಂಡ ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಅಂಕಪಟ್ಟಿಯಲ್ಲಿ ಮೇಲಿರುವ ಆರ್ ಸಿಬಿ ಪ್ಲೇಆಫ್ ದಾರಿ ಸಮೀಪದಲ್ಲಿ ಇರುವಾಗಲೇ ಕೊಹ್ಲಿ ಅವರ ನಡೆ ಅಭಿಮಾನಿಗಳಿಗೆ ಆಘಾತ ನೀಡಿದೆ.