ಧಾರವಾಡ: ಸಂಘಗಳು ಹುಟ್ಟಿಕೊಳ್ಳುವುದೇ ಸಾಮಾನ್ಯವಾಗಿ ಸಾರ್ವಜನಿಕ ಆಸ್ತಿ ರಕ್ಷಣೆಗೆ. ಆದರೆ ಹುಬ್ಬಳ್ಳಿಯಲ್ಲೊಂದು ಸಂಘ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡವುದನ್ನು ಬಿಟ್ಟು ಕಬಳಿಸಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಅಂಜನಾ ಪಟೇಲ್ ಸೇವಾ ಸಂಘವೊಂದು ಸಾರ್ವಜನಿಕರಿಗೆ ಮೀಸಲಿಟ್ಟ ಉದ್ಯಾನವನದ 24 ಗುಂಟೆ ಜಾಗವನ್ನು ಕಬಳಿಸಿದೆ. ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿರುವ ಸಿಟಿ ಸರ್ವೇ ನಂಬರ 4917/ಬಿ, ಸೈಟ್ ನಂಬರ 43 ಎ ನಂಬರಿನ ಆಸ್ತಿಯನ್ನು ಉದ್ಯಾನವನಕ್ಕೆಂದು ಮಹಾನಗರ ಪಾಲಿಕೆ ಮೀಸಲಿಟ್ಟಿತ್ತು.
ಆದರೆ 2020ರ ಜನೆವರಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮ ಮಾಡುವ ನೆಪದಲ್ಲಿ ಈ ಜಾಗಕ್ಕೆ ಖಾಯಂ ಕಂಪೌಂಡ ಹಾಕಿ ಆಸ್ತಿಯನ್ನು ಕಬಳಿಸಿದ್ದಾರೆ. ಮಹಾನಗರ ಪಾಲಿಕೆಗೆ ಈ ವಿಚಾರ ಗೊತ್ತಿದ್ದರೂ ಕಂಡೂ ಕಾಣದಂತೆ ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿಯ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಗೆ ಸಾಕಷ್ಟು ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪಾಲಿಕೆಯ ಅಧಿಕಾರಿಯೊಬ್ಬರು ಅಂಜನಾ ಪಟೇಲ್ ಸೇವಾ ಸಮಾಜದಿಂದ ಹಣ ಪಡೆದು ಆಸ್ತಿ ಕಬಳಿಸಲು ಸಹಕರಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.