ಯಾವುದೇ ಕಾರಣಕ್ಕೂ ಶಾಲಾ ಶಿಕ್ಷಣ ಶುಲ್ಕ ಕಡಿತ ಮಾಡುವುದಿಲ್ಲ ಎಂದು ಘೋಷಿಸುವ ಮೂಲಕ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯ ಸರಕಾರಕ್ಕೆ ಸವಾಲು ಹಾಕಿದೆ.
ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿ ನಡುವೆ ಹಗ್ಗಜಗ್ಗಾಟ ಮುಂದುವರಿದಿದ್ದು, ಭಾನುವಾರ ನಡೆದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸಭೆಯಲ್ಲಿ ಶಾಲಾ ಶುಲ್ಕ ಕಡಿಮೆ ಮಾಡದೇ ಇರಲು ನಿರ್ಧರಿಸಿವೆ.
ಕಳೆದ ವರ್ಷ ರಾಜ್ಯ ಸರಕಾರ ಶೇ.30ರಷ್ಟು ಶುಲ್ಕ ಕಡಿತಕ್ಕೆ ಮಾಡಿದ್ದ ಸೂಚನೆ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ವಿಚಾರಣೆ ಹಂತದಲ್ಲಿದೆ. ಇದರ ನಡುವೆಯೇ ಸತತ ಎರಡನೇ ವರ್ಷವೂ ಶುಲ್ಕ ಕಡಿತ ಮಾಡುವಂತೆ ಸೂಚಿಸಿದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಎಷ್ಟೋ ಪೋಷಕರು ಸರ್ಕಾರ ಕಡಿತ ಮಾಡಿದ ನಂತರವೂ ಶೇ.70ರಷ್ಟು ಶುಲ್ಕವನ್ನೇ ಪಾವತಿಸಿಲ್ಲ. ಅಲ್ಲದೇ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ಹೊರೆಯಾಗಿದ್ದು, ಯಾವುದೇ ಕಾರಣಕ್ಕೂ ಈ ಬಾರಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ರೂಪ್ಸಾ ಸಂಘಟನೆ ಸ್ಪಷ್ಟಪಡಿಸಿದೆ.
ಇನ್ನೂ ಶುಲ್ಕ ಪಾವತಿ, ವಿನಾಯಿತಿ ಬಗ್ಗೆ ಸರ್ಕಾರ ಆದೇಶ ಹೊರಡಿಸಿಲ್ಲ. ಕೆಲವು ಪೋಷಕರು 2 -3 ವರ್ಷಗಳಿಂದ ಶುಲ್ಕ ಪಾವತಿಸಿಲ್ಲ. ಹಾಗಾಗಿ ಶುಲ್ಕ ಪಾವತಿಸಬೇಕು. ಒಂದೇ ಹಂತದಲ್ಲಿ ಶುಲ್ಕ ಕಟ್ಟಲು ಹೇಳುತ್ತಿಲ್ಲ. ಪೋಷಕರು ಹಲವು ಕಂತುಗಳಲ್ಲಿ ಶುಲ್ಕ ಪಾವತಿಸಬೇಕು. ಹಾಗೂ ಶೇ.20ರಷ್ಟು ಮಕ್ಕಳ ದಾಖಲಾತಿ ಕುಂಠಿತವಾಗಿದೆ. ಪಾಲಕ ಪೋಷಕರಿಗೆ ತಮ್ಮ ಮಕ್ಕಳನ್ನ ಕಡ್ಡಾಯವಾಗಿ ದಾಖಲು ಮಾಡುವಂತೆ ಸರ್ಕಾರ ನಿರ್ದೇಶನ ಹೊರಡಿಸಬೇಕು ಎಂದು ಒತ್ತಾಯಿಸಿದರು.