ಕಾಂಗ್ರೆಸ್ ಆಡಳಿತದಲ್ಲಿ ಇಟ್ಟಿದ್ದ ಹೆಸರುಗಳನ್ನು ಬದಲಾಯಿಸುತ್ತಿದ್ದಿರ. ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿದರೆ ಸುಮ್ಮನೆ ನೋಡಿಕೊಂಡು ಕೂರಲು ನಾವೇನು ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ. ಮುಂದೆ ಏನು ಎಂಬುದನ್ನು ಮಾಡಿ ತೋರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ಹೇಳಿದ್ದಾರೆ. ಸಿಟಿ ರವಿ ಇಂದಿರಾ ಕ್ಯಾಂಟೀನ್ ಮುಟ್ಟಿ ನೋಡಲಿ. ಆಮೇಲೆ ಗೊತ್ತಾಗುತ್ತೆ ಎಂದರು.
ಕೇಂದ್ರದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಬದಲಿಸಿದ್ದಾರೆ. ಧ್ಯಾನ್ ಚಂದ್ ದೊಡ್ಡ ಕ್ರೀಡಾಪಟು. ಅವರ ಹೆಸರಿನಲ್ಲೇ ಬೇರೆ ಏನಾದರೂ ಮಾಡಿ. ಅದನ್ನು ಬಿಟ್ಟು ಇರುವ ಹೆಸರನ್ನು ತೆಗೆದು ಬೇರೆ ಹೆಸರಿಡುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಹೆಸರು ಇಟ್ಟಿದ್ದೇವೆ ಎನ್ನುತ್ತಾರೆ. ಸಾರ್ವಜನಿಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿ ಅಂತಿದ್ದಾರೆ. ಅದನ್ನು ಯಾಕೆ ಮಾಡ್ತಿಲ್ಲ? ಸರ್ದಾರ್ ವಲ್ಲಭಭಾಯ್ ಕ್ರೀಡಾಂಗಣ ಹೆಸರು ತೆಗೆದು ಮೋದಿ ಹೆಸರಿಟ್ಟಿದ್ದಾರೆ. ಇದು ನ್ಯಾಯಾನಾ ಎಂದು ಅವರು ಹೇಳಿದರು.
ವಾಜಪೇಯಿ ಹೆಸರಿನಲ್ಲಿ ಸಾರಿಗೆ ಇದೆ. ನಾವು ವಿರೋಧ ಮಾಡಿದ್ವಾ? ರಾಜೀವ್ ಗಾಂಧಿ ಈ ರಾಷ್ಟ್ರಕ್ಕೆ ಏನೂ ಮಾಡ್ಲಿಲ್ವ? 18 ವರ್ಷದ ಯುವ ಜನತೆಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ. ಪಂಚಾಯತ್ ರಾಜ್ ತಂದಿದ್ದು ರಾಜೀವ್ ಗಾಂಧಿ. ಹೆಸರು ಬದಲಾವಣೆ ಮಾಡಲು ಮುಂದಾಗಲಿ ಆಮೇಲೆ ಕಾಂಗ್ರೆಸ್ ಪಕ್ಷ , ಈ ದೇಶದ ಜನ ಏನ್ ಮಾಡ್ತಾರೆ ಅಂತ ಗೊತ್ತಾಗಲಿದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದರು.