ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯತ್ತಿದ್ದು, ಕಾಂಗ್ರೆಸ್ ನಲ್ಲಿ ಇದ್ದಂತೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹೆಚ್ಚಾಗಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವುದರಿಂದ ಅವರಿಗೆ ನಿಯಂತ್ರಣ ಮಾಡಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಎ.ಎಚ್.ವಿಶ್ವನಾಥ್ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ರಾಜ್ಯ ಹಾಗೂ ಪಕ್ಷ ಮುಖ್ಯ. ಆದ್ದರಿಂದ ನಾನು ನೇರವಾಗಿಯೇ ಮಾತನಾಡಿದ್ದೇನೆ. ಲಿಂಗಾಯತ ಸಮುದಾಯದ ಸಿಎಂ ಬೇಡ ಅನ್ನಬಾರದು, ಪಂಚಮಸಾಲಿ ಸಿಎಂ ಮಾಡಲಿ. ಯಾವುದೇ ಒಂದು ವರ್ಗ ಬಿಜೆಪಿಗೆ ಮತ ಹಾಕಿಲ್ಲ. ಎಲ್ಲಾ ವರ್ಗದವರೂ ಮತ ಹಾಕಿದ್ದಾರೆ ಎಂದು ಅವರು ಹೇಳಿದರು.
ಯಾವ ಮಠಾಧಿಪತಿಗಳು ಬಸವನ ತತ್ವ ಮೀರಿ ಹೋಗಬಾರದು. ಬಿಜೆಪಿಗೆ ಎಲ್ಲ ಜಾತಿ- ಧರ್ಮದವರು ಮತ ಹಾಕಿದ್ದಾರೆ. ಕೇವಲ ಲಿಂಗಾಯುತ ಸಮುದಾಯ ಮತ ಹಾಕಿಲ್ಲ. ಅರುಣ್ ಸಿಂಗ್ ಜೊತೆ 20 ನಿಮಿಷ ಮಾತನಾಡಿದ್ದು, ಆಡಳಿತದಲ್ಲಿ ಹಸ್ತಕ್ಷೇಪ , ಭ್ರಷ್ಟಚಾರ ಹೆಚ್ಚಾಗಿದೆ. ಸರ್ಕಾರದ ಮೇಲೆ ಸಾರ್ವಜನಿಕ ಅಭಿಪ್ರಾಯ ಹೋಗಿದೆ. ಬಿಜೆಪಿ ಹಾಗೂ ಮೋದಿ ಮೇಲೆ ನಂಬಿಕೆ ಹೋಗ್ತಿದೆ ಎಂದು ಹೇಳಿದ್ದೇನೆ ಎಂದು ಅವರು ವಿವರಿಸಿದರು.
ಎಲ್ಲರನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿ ಸಿಎಂಗೆ ಈಗ ಇಲ್ಲ. ಯಡಿಯೂರಪ್ಪ ವಯಸ್ಸಾಗಿದೆ. ಸಿಎಂ ಬದಲಾವಣೆ ಮಾಡಬೇಕು. ಆ ಸ್ಥಾನಕ್ಕೆ ಪಂಚಮಸಾಲಿ ಲಿಂಗಾಯುತ ನಾಯಕರಿಗೆ ಸಿಎಂ ಸ್ಥಾನ ಕೊಡಲಿ ಎಂದು ವಿಶ್ವನಾಥ್ ಆಗ್ರಹಿಸಿದರು.