ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಭಾನುವಾರ ನಡೆಯುವ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಜಯಿಸಿ ಹ್ಯಾಟ್ರಿಕ್ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.
ಪುಣೆಯಲ್ಲಿ ಭಾನುವಾರ ಹೊನಲು-ಬೆಳಕಿನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ತಿರುಗೇಟು ನೀಡಿದ್ದರೂ ಇಂಗ್ಲೆಂಡ್ ತಂಡ ಸರಣಿ ಗೆಲುವು ಕಾಣದೇ ಹತಾಶಗೊಂಡಿದ್ದು, ಭಾರತ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಲು ಕೊನೆಯ ಅವಕಾಶವಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಭಾರತ- ಇಂಗ್ಲೆಂಡ್ ತಂಡಗಳ ಪಾಲಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ.
ಭಾರತದ ಆರಂಭ ಕಳಪೆಯಾಗಿದ್ದರೆ, ಇಂಗ್ಲೆಂಡ್ ಆರಂಭ ಅದ್ಭುತವಾಗಿದೆ. ಆದರೆ ಭಾರತದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದ್ದರೆ ಇಂಗ್ಲೆಂಡ್ ಮಧ್ಯಮ ಕ್ರಮಾಂಕ ಬಲ ಇಲ್ಲದಂತಾಗಿದೆ. ಬ್ಯಾಟ್ಸ್ ಮನ್ ಗಳು ರನ್ ಹೊಳೆ ಹರಿಸುತ್ತಿರುವುದರಿಂದ ಬೌಲರ್ ಗಳ ಮೇಲೆ ಹೆಚ್ಚಿನ ಒತ್ತಡವಿದೆ.
ಭಾರತದಲ್ಲಿ ಯುವ ಬೌಲರ್ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ವೈಫಲ್ಯ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಸಮರ್ಪಕವಾಗಿ ಬಳಸಿಕೊಳ್ಳದೇ ಇರುವುದು ಕೂಡ ತಂಡ ಎಡವಲು ಕಾರಣ ಎನ್ನಲಾಗಿದೆ.