ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಶೇ. 20ರಿಂದ 25ರ ಪರ್ಸೆಂಟೇಜ್ ಸರಕಾರ. ಲಂಚ ಕೊಡದೇ ಈ ಸರಕಾರದಲ್ಲಿ ಏನೂ ಆಗಲ್ಲ. ಮಗ ವಿಜಯೇಂದ್ರ ಕೂಡ ಸಿಎಂ ರೀತಿ ಆಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದಾವಣಗೆರೆಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ಸಿಎಂ ಯಡಿಯ್ಯೂರಪ್ಪರ ಅಳಿಯ ಬ್ಯಾಂಕ್ ಅಕೌಂಟ್ ಮೂಲಕ ಹಣ ಪಡೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಕೊರೊನಾದಿಂದ ಮೃತಪಟ್ಟವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಿ ಎಂದು ಸರಕಾರವನ್ನು ಒತ್ತಾಯಿಸಿದೆ. ಪ್ರವಾಹ ಸೇರಿದಂತೆ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ 5 ಲಕ್ಷ ರೂಪಾಯಿ ನೀಡಲಾಗುತ್ತೆ. ಈಗ ಘೋಷಿಸಿರುವ ಕೊರೊನಾದಿಂದ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಸಿದ್ದರಾಮಯ್ಯ ಸರಕಾರದಲ್ಲಿ ಏನು ಸಾಧನೆ ಮಾಡಿದ್ದಾರೆ ಅಂತ ಗೊತ್ತು? ಅವರ ಪಕ್ಷದಲ್ಲೇ ಸಿಎಂ ಸ್ಥಾನಕ್ಕಾಗಿ ಗುದ್ದಾಟ ನಡೆದಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ? ಅವರೇನೂ ನಮ್ಮ ಪಕ್ಷದವರಾ? ಅವರಿಗೂ ನಮಗೂ ಏನ್ ಸಂಬಂಧ? ಬೇಕು ಅಂತಾನೇ ಸುಳ್ಳು ಹೇಳ್ತಾರೆ. ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲಿ ಹೊಡೆದಾಡುತ್ತಿದ್ದೇವೆ? ನಮ್ಮಲ್ಲಿ ಒಗ್ಗಟ್ಟಿದೆ ಗುಂಪುಗಾರಿಕೆ ಇಲ್ಲ ಎಂದರು.