ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾದ ಘಟನೆ ಮಂಗಳೂರು ನಗರದ ಹೊಯ್ಗೆಬಜಾರ್‌ನಲ್ಲಿ ನಡೆದಿದೆ.
ದಕ್ಕೆಗೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ಸಮುದ್ರದ ದಡದಲ್ಲಿ ಯುವತಿಯ ಮೃತದೇಹ ನೋಡಿ ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಸರಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್‌ನ ಶವಾಗಾರಕ್ಕೆ ತಂದಿದ್ದಾರೆ.
ಸುಮಾರು 5 ಅಡಿ ಎತ್ತರದ ಯುವತಿ ಕಪ್ಪು ಬಣ್ಣದ ಟೀಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂಡಲು ಹೊಂದಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ.
ಈ ಕುರಿತು ಮಂಗಳೂರು ದಕ್ಷಿಣ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.