ವರದಿ: ನಾಗರಾಜ ಕೋಟೆ
ಯಾದಗಿರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್, ಈ ತಿಂಗಳ 20 ರಂದು ಸುರಪುರ ತಾಲೂಕಿನ ಖಾನಾಪೂರ ಎಸ್ ಎಚ್ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಮಾಡಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯ, ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವರಾದ ಆರ್ ಅಶೋಕ್ ಅವರ ಆದೇಶದ ಮೇರೆಗೆ, ನಾನು ಸೇರಿದಂತೆ ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು, ಪ್ರತಿ ತಿಂಗಳ 3 ನೇ ಶನಿವಾರ, ಒಂದು ದಿನ ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದಿವೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಆ ಗ್ರಾಮದಲ್ಲಿನ ಗ್ರಾಮಸ್ಥರ ಪಹಣಿ, ಪಿಂಚಣಿ, ಆಶ್ರಯ ಮನೆಗಳ ಸಮಸ್ಯೆ, ಸರ್ಕಾರಿ ಭೂಮಿ ಒತ್ತುವರಿ, ಪಡಿತರ ಅಂಗಡಿಗಳ ಸಮಸ್ಯೆಗಳು ಸೇರಿದಂತೆ, ಕಂದಾಯ ಇಲಾಖೆ ವ್ಯಾಪ್ತಿಗಳಲ್ಲಿ ಬರುವ ವಿವಿಧ ವ್ಯಾಜ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಮಾಡಲಾಗುತ್ತದೆ ಜೊತೆಗೆ ಅದೇ ದಿನದಂದು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರಗಳು ಸಹ ತಮ್ಮ ತಾಲೂಕಿನ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು, ಅವರು ಸಹ ಒಂದು ದಿನ ಜನರ ಸಂಕಷ್ಟ ಆಲಿಸುತ್ತಾರೆ.

ಕಂದಾಯ ಇಲಾಖೆ ಮಾತ್ರವಲ್ಲದೆ, ಕೃಷಿ, ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಅರಣ್ಯ ಇಲಾಖೆಯೂ ಸಹ ಇದರಲ್ಲಿ ಭಾಗವಹಿಸುತ್ತಾರೆ.. ಹೀಗಾಗಿ ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಗಪ್ರಿಯ ಆರ್ ಮನವಿ ಮಾಡಿದರು.