ಕೆಜಿಎಫ್-2 ಚಿತ್ರ ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಘೋಷಿಸಿದೆ. ಈ ಮೂಲಕ ಯಶ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಸಲಾರ್ ಒಂದೇ ದಿನ ಬಿಡುಗಡೆ ಆಗಿಲಿದ್ದು, ಎರಡು ಚಿತ್ರಗಳು ಪೈಪೋಟಿ ನಡೆಸಲಿವೆ.
ಕೆಜಿಎಫ್-2 ಮತ್ತು ಸಲಾರ್ ಎರಡೂ ಚಿತ್ರಗಳು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವಾಗಿದೆ. ಎರಡೂ ಚಿತ್ರಗಳು ಭಾರೀ ಕುತೂಹಲ ಮೂಡಿಸಿದ್ದು, ದಕ್ಷಿಣ ಭಾರತದ ಚಿತ್ರಗಳಾಗಿದ್ದರೂ ಜಗತ್ತಿನಾದ್ಯಂತ ಬಿಡುಗಡೆಗೆ ಮುನ್ನವೇ ಸುದ್ದಿ ಮಾಡಿದೆ.
ನಟ ಯಶ್ ಟ್ವಿಟರ್ ನಲ್ಲಿ ಕೆಜಿಎಫ್-2 ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಸಲಾರ್ ಚಿತ್ರ ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ.
ಕೆಜಿಎಫ್ ಮೊದಲ ಚಿತ್ರ ಗಡಿ ದಾಟಿ ದಾಖಲೆ ಬರೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಭಾಗದ ಚಿತ್ರಕ್ಕೆ ಭಾರೀ ಬೇಡಿಕೆ ಉಂಟಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿತ್ತು.
ಕೆಜಿಎಫ್ 2 ಚಿತ್ರದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ರವಿನಾ ಟಂಡನ್ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದು, ಚಿತ್ರೀಕರಣ ಮುಗಿದಿದೆ. ಆದರೆ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಪದೇಪದೆ ಮುಂದೂಡಿಕೆಯಾಗಿದೆ.
ಕೆಜಿಎಫ್ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಸಲಾರ್ ಸಿದ್ಧಗೊಳ್ಳುತ್ತಿದ್ದು, ಇದು ಶ್ರೀ ಮುರಳಿ ನಟಿಸಿದ್ದ ಉಗ್ರಂ ಚಿತ್ರದ ರಿಮೇಕ್ ಎಂದು ಹೇಳಲಾಗಿದೆ.