ಟೋಕಿಯೊ: ಜಪಾನ್‍ನ ವ್ಯಕ್ತಿಯೊಬ್ಬ ಸುಮಾರು 22 ಸಾವಿರ ಡಾಲರ್ ಖರ್ಚು ಮಾಡಿ ನಾಯಿಯಾಗಿ ರೂಪಾಂತರಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. `ಐ ವಾಂಟ್ ಟು ಬಿ ಆಯನ್ ಅನಿಮಲ್’ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಈ ವ್ಯಕ್ತಿಯನ್ನು ನಾಯಿಯಾಗಿ ರೂಪಾಂತರಗೊಳಿಸುವ ಕಾರ್ಯವನ್ನು ಟಿವಿ ಧಾರಾವಾಹಿ, ಸಿನಿಮಾಗಳಿಗೆ ವೇಷಭೂಷಣ ನಿರ್ಮಿಸಿ ಕೊಡುವ ಝೆಪೆಟ್ ಎಂಬ ಸಂಸ್ಥೆಗೆ ವಹಿಸಲಾಗಿತ್ತು ಎನ್ನಲಾಗಿದೆ.
ಸುಮಾರು 40 ದಿನದಲ್ಲಿ ಈ ಸಂಸ್ಥೆ ನಾಯಿಯಂತೆ ಹೋಲುವಂತೆ ಸಿದ್ಧಪಡಿಸಿದೆ. ಕೋಲಿ ನಾಯಿಯ ಮಾದರಿಯಲ್ಲಿ ಇದು ನಾಲ್ಕು ಕಾಲುಗಳ ಮೇಲೆ ನಡೆಯುವ ನಿಜವಾದ ನಾಯಿಯ ನೋಟವನ್ನು ಪುರ್ನ ರೂಪಿಸಿದೆ. `ಪ್ರಾಣಿಯಾಗಬೇಕು ಎಂಬ ಬಾಲ್ಯಕಾಲದ ಕನಸು ಈಗ ನನಸಾಗಿದೆ. ಆದರೆ ಈ ಕನಸಿನ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲು ನನಗೆ ಹಿಂಜರಿಕೆಯಾಗುತ್ತಿತ್ತು. ಈಗ ನಾನು ಪ್ರಾಣಿಯಾಗಿರುವುದನ್ನು ತಿಳಿದ ಬಳಿಕ ನನ್ನ ಕುಟುಂಬದವರಿಗೆ, ಸ್ನೇಹಿತರಿಗೆ ಅಚ್ಚರಿಯಾಗಬಹುದು’ ಎಂದು ಈ ವ್ಯಕ್ತಿ ಹೇಳಿದ್ದಾನೆ.
ನಾಯಿಯಂತೆ ಕುತ್ತಿಗೆಗೆ ಚೈನ್ ಬಿಗಿಯಲ್ಪಟ್ಟು, ನಾಯಿಯಂತೆ ನಾಲ್ಕು ಕಾಲಿನ ಮೇಲೆ ನಡೆದುಕೊಂಡು ಪಾರ್ಕ್‍ನಲ್ಲಿ ಅಡ್ಡಾಡುತ್ತಿರುವ ವೀಡಿಯೊವನ್ನು ಈತ ತನ್ನ ಚಾನೆಲ್ ಹಾಗೂ ಟ್ವೀಟ್ ನಲ್ಲಿ ಅಪ್‍ಲೋಡ್ ಮಾಡಿದ್ದಾನೆ.