ಯಾದಗಿರಿ/ರಾಯಚೂರು: ಕೃಷ್ಣಾ ಜಲಾಶಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬಂದಿದೆ. ಜಲಾಶಯ ಈಗ 80% ಭರ್ತಿಯಾಗಿದೆ. ಇದರಿಂದಾಗಿ ಸುಮಾರು 1.50 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕೃಷ್ಣಾ ನದಿಗೆ ಬಸವಸಾಗರ ಜಲಾಶಯದ 24 ಗೇಟ್‍ಗಳ ಮೂಲಕ 1.80 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ರಿಲೀಸ್ ಮಾಡಲಾಗಿದೆ.
ಯಾದಗಿರಿ ಹಾಗೂ ರಾಯಚೂರು ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಜೊತೆಗೆ ನದಿ ತೀರದ ಗ್ರಾಮಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೇ ಮೈಕ್ ಮೂಲಕ ಜಾನುವಾರುಗಳನ್ನು ನದಿ ಸಮೀಪಕ್ಕೆ ಬಿಡದಂತೆ, ಜನರು ನದಿಗೆ ಇಳಿಯದಂತೆ, ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೂ ಮುನ್ನ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. 1 ಲಕ್ಷದ 50 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಇಂದು ಬೆಳಿಗ್ಗೆ ಜಲಾಶಯದ 12 ಕ್ರಸ್ಟಗೇಟ್‍ಗಳನ್ನು ತೆರದು 1.80 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.