ಕಲಬುರಗಿ : ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ಥಳಿ ಬಳಿ ಸಿಕ್ಕ ಚೀಟಿಯೊಂದು ತೀವ್ರ ಕುತೂಹಲ ಮೂಡಿಸಿದೆ.
ಮಂಗಳವಾರ (ಜ.23) ರಂದು ಕಲಬುರಗಿ ಹೊರವಲಯದ ಕೋಟನೂರ (ಡಿ) ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಲಾಗಿತ್ತು. ಕಿಡಿಗೇಡಿಗಳು ಪುತ್ಥಳಿಗೆ ಚಪ್ಪಲಿ ಹಾರ ಹಾಕಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ್ದರು. ಇದೀಗ ಈ ಸ್ಥಳದಲ್ಲಿ ಸ್ಥಳಿಯರಿಗೆ ಚೀಟಿಯೊಂದು ಸಿಕ್ಕಿದೆ.
ಚೀಟಿಯಲ್ಲಿ ಸ್ಥಳಿಯ 10 ಜನರ ಹೆಸರು ಬರೆಯಲಾಗಿದ್ದು, “ಇವರು ನನಗೆ ಹಣ ಕೊಡುವುದಾಗಿ ಹೇಳಿದ್ದರು. ಹಣದ ಆಸೆಗಾಗಿ ಈ ಕೃತ್ಯ ಎಸಗಿದ್ದೇವೆ” ಅಂತ ಬರೆಯಲಾಗಿದೆ. ಆದರೆ ಚೀಟಿ ಬರೆದಾತ ತನ್ನ ಹೆಸರನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಮೂಲಕ ತಮ್ಮ ಹಗೆತನಕ್ಕಾಗಿ ಅಂಬೇಡ್ಕರ ಅವರಿಗೆ ಅಪಮಾನ ಮಾಡುವಂತಹ ನೀಚ ಕೃತ್ಯಕ್ಕೆ ಕಿಡಿಗೇಡಿಗಳು ಇಳಿದರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಕರಣ ದಾಖಲಿಸಿಕೊಂಡ ಗುಲ್ಬರ್ಗಾ ವಿವಿ ಪೊಲೀಸರು ಚೀಟಿ ರಹಸ್ಯ ಬೆನ್ನು ಹತ್ತಿದ್ದಾರೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ರೀತಿ ಚೀಟಿ ಬರೆಯಲು ಕಾರಣವೇನು? ಅಂಬೇಡ್ಕರ್ ಅವರ ಪ್ರತಿಮೆ ಅಪಮಾನಕ್ಕೂ ಮತ್ತು ಈ ಚೀಟಿಗೂ ಎನು ಸಂಬಂಧ ಎಂಬುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.