ಚಿಕ್ಕಬಳ್ಳಾಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳ್ಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ.
ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ, ಅವರ ಹಲವು ಆಪ್ತರ ಮನೆಗಳಿಗೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಆಪ್ತರೇ ಟಾರ್ಗೆಟ್ ಆಗಿದ್ದಾರೆ. ಕೋಲಾರ-ಚಿಕ್ಕಮಗಳೂರು ಹಾಲು ಒಕ್ಕೂಟದಲ್ಲಿ (ಕೋಚಿಮುಲ್) ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಕೋಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ನಿವಾಸ ನಿವಾಸವಿದೆ. ಬೆಳಗ್ಗೆ 6 ಗಂಟೆಗೆ ಇ.ಡಿ ತಂಡ ಲಗ್ಗೆ ಇಟ್ಟಿದೆ. ಮನೆಯಲ್ಲಿರುವ ಮಹತ್ವ ದಾಖಲೆ ಪರಿಶೀಲನೆ ನಡೆಸುತ್ತಿದೆ. ಮನೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ, ಯಾರಿಗೂ ಒಳಗೆ ಹೋಗಲು, ಯಾರಿಗೂ ಒಳಗೆ ಬರಲು ಅವಕಾಶ ನೀಡಲಾಗುತ್ತಿಲ್ಲ.
25 ಜನ ಇಡಿ ಸಿಬ್ಬಂದಿಗಳ ತಂಡದಿಂದ ದಾಳಿ ನಡೆದಿದೆ. ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಕೋಚಿಮುಲ್ ಡೈರಿ ಮೇಲೆ ಇಡಿ ತಂಡ ದಾಳಿಯಿಟ್ಟು, ಡೈರಿ ಕಚೇರಿಯ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದೆ.
ಈ ನಡುವೆ, ಶಾಸಕ ನಂಜೇಗೌಡ ಮನೆ ಮಾತ್ರವಲ್ಲದೆ, ಅವರ ಆಪ್ತ ಅಬ್ಬೇನಹಳ್ಳಿ ಗೋಪಾಲ್ ನಿವಾಸ, ಶಾಸಕರ ಪಿಎ ಹರೀಶ್ ದೊಡ್ಡ ಮಲ್ಲೆ ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ. ಶಾಸಕರ ಮಗನ ಹೆಸರಿನಲ್ಲಿ ಇರುವ ನಂಜುಂಡೇಶ್ವರ ಸ್ಟೋನ್ ಜಲ್ಲಿ ಕ್ರಷರ್ ಮೇಲೆ ದಾಳಿ ಮಾಡಲಾಗಿದೆ.