ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬ್ಯಾಂಕ್‍ಗಳಿಂದ ಸಾಲ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅವರ ವಿರುದ್ಧ ನಗರದ ವಿವಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನಿಂದ ಬೆಳಗಾವಿಯ ಗೋಕಾಕ್‍ನ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಅವರು ಸಾಲ ಪಡೆದಿದ್ದಾರೆ. 2013 ರಿಂದ 2017 ರವರೆಗೆ 232 ಕೋಟಿ 88 ಲಕ್ಷ ರೂ. ಸಾಲ ಪಡೆದಿದ್ದಾರೆ. ಅಲ್ಲದೇ ಬೇರೆ ಬೇರೆ ಜಿಲ್ಲೆಗಳ ಅಪೆಕ್ಸ್ ಬ್ಯಾಂಕ್‍ನ ಸಮೂಹ ಬ್ಯಾಂಕ್‍ಗಳಲ್ಲೂ ಸಾಲ ಪಡೆದಿರುವ ಅವರು, 439 ಕೋಟಿ 7 ಲಕ್ಷ ರೂ. ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್ ಕಂಪನಿ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ರಮೇಶ್ ಜಾರಕಿಹೊಳಿಯವರು ಕಂಪನಿ ಸ್ಥಾಪನೆ, ವಿಸ್ತರಣೆ ಹಾಗೂ ನಿರ್ವಹಣೆಗಾಗಿ ಸಾಲ ಪಡೆದಿದ್ದರು. ಇದೀಗ ಬ್ಯಾಂಕ್‍ಗೆ ಯಾವುದೇ ಮಾಹಿತಿ ನೀಡದೆ ಆಡಳಿತ ಮಂಡಳಿ ಹುದ್ದೆಗಳಿಂದ ಹೊರಬಂದಿದ್ದಾರೆ. ಈ ಮೂಲಕ ಬ್ಯಾಂಕ್‍ಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಬ್ಯಾಂಕ್‍ನ ಮ್ಯಾನೇಜರ್ ರಾಜಣ್ಣ ಎಂಬವರು ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ವಿವಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.