ಬೆಂಗಳೂರು : ಎಸ್ಸಿ – ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿರಿಸಿದ ಹಣ ಇತರ ಉದ್ದೇಶಕ್ಕೆ ಬಳಸಿಲಿಲ್ಲ, ಎಸ್ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿನ ಅನುದಾನಗಳನ್ನು ಇತರ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಕೆಲವರು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿರಿಸಿದ ಅನುದಾನಗಳನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿದ್ದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ 2013ರ ಸೆಕ್ಷನ್ 7(ಡಿ)ಯನ್ನು ರದ್ದು ಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದ್ದು, ಬಜೆಟ್‌ನಲ್ಲೂ ಈ ಬಾರಿ ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಇಲಾಖೆಗಳಿಗೆ ಅನುದಾನ ಹಂಚಿಕೆಯನ್ನು ಕಡಿತಗೊಳಿಸಿದ್ದು, ಅದನ್ನು ಈ ಬಾರಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಸೆಕ್ಷನ್ 7(ಡಿ) ಅಡಿಯಲ್ಲಿದ್ದ ಕಾರಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ, ಸೇತುವೆಗಳಿಗೆ ಬಳಸಲು ಅವಕಾಶವಿತ್ತು. ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಆಗುತ್ತಿದ್ದ ಸಮಸ್ಯೆಯನ್ನು ನಮ್ಮ ಸರ್ಕಾರ ನಿಲ್ಲಿಸಿದೆ ಎಂದು ಸಿಎಂ ತಿಳಿಸಿದ್ದಾರೆ.