State News

ಮಣಿಪುರದಲ್ಲಿ ನಡೆದ ಘಟನೆಗೆ ಇಂದು ಬಹುಜನ ಸಮಾಜ ಪಾರ್ಟಿಯಿಂದ ಪ್ರತಿಭಟನೆ…!

ಮಣಿಪುರದಲ್ಲಿ ಮೇ 4, 2023 ರಂದು ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿ ನಾನಾರೀತಿ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆಯು ಇಡೀ ದೇಶವೇ ತಲೆತಗ್ಗಿಸುವಂತಹ ಅಮಾನುಷ ಕೃತ್ಯವಾಗಿದೆ. ಈ ದೌರ್ಜನ್ಯವನ್ನು ತಡೆಗಟ್ಟಲು ಪ್ರಯತ್ನಿಸಿದ ಸಂತ್ರಸ್ಥೆ ಮಹಿಳೆಯ ತಮ್ಮನನ್ನು ಈ ಕಿರಾತಕರು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಈ ದೌರ್ಜನ್ಯವನ್ನು ಕರ್ನಾಟಕ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.

ಮಣಿಪುರ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ವಾಸಮಾಡುವ ಕ್ರೈಸ್ತ ಸಮುದಾಯದ ಕುಕಿಗಳಗೂ ಮತ್ತು ಹಿಂದೂ ಸಮುದಾಯದ ಮೈತೇಯಿ ಸಮುದಾಯಗಳ ಮಧ್ಯೆ ಕಳೆದ 80 ದಿನಗಳಂದಲೂ ಜನಾಂಗೀಯ, ಘರ್ಷಣೆ ಉಂಟಾಗಿ ಮಕ್ಕಳು, ಮಹಿಳೆಯರು. ವೃದ್ಧರಾದಿಯಾಗಿ ಸುಮಾರು 156 ಜನ ಬಲಿಯಾಗಿದ್ದಾರೆ. ಕುಕಿ ಸಮುದಾಯದ ಹತ್ತಾರು ಸಾವಿರ ಮನೆಗಳನ್ನು, ಚರ್ಚುಗಳನ್ನು ಸುಟ್ಟುಹಾಕಲಾಗಿದೆ. ಹೀಗೆ ಮಣಿಪುರದಲ್ಲಿ ಕಳೆದ 80 ದಿನಗಳಿಂದಲೂ ಹೇಳತೀರದ ಹಿಂಸಾಚಾರವು ನಡೆಯುತ್ತಿದೆ. ಇತ್ತೀಚೆಗೆ ಮೈತೇಯಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿರುವ ಬಗ್ಗೆ ಉಚ್ಛನ್ಯಾಯಾಲಯದ ತೀರ್ಪು ಬಂದ ಮೇಲೆ ಹಿಂಸಾಚಾರವು ಹೆಚ್ಚಾಯಿತೆಂದು ಹೇಳಬಹುದು. ರಾಜಕೀಯವಾಗಿ ಬಲಿಷ್ಟರಾದ ಮತ್ತು ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಮೈತೇಯಿ ಸಮಾಜಕ್ಕೆ ಮೀಸಲಾತಿ ಬಲ ಸಿಕ್ಕಿದ್ದು, ಹಿಂಸಾಚಾರಕ್ಕೆ ಕಾರಣವಾಗಿರಬಹುದು.

ಅಮಾನುಷ ಘಟನೆ : ಮೇ 4, 2023 ರಂದು ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ನಂತರ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಒಬ್ಬಾಕೆಯನ್ನು ಕೊಲೆ ಮಾಡಲಾಗಿದೆ. ಈ ಅಮಾನುಷ ಘಟನೆ ಯಲ್ಲಿ ಸುಮಾರು 200 ಜನಕ್ಕೂ ಮೇಲ್ಪಟ್ಟು ದೌರ್ಜನ್ಯಕೋರರು ಭಾಗಿಯಾಗಿದ್ದು ಅವರನ್ನು ಕೂಡಲೇ ಬಂದಿಸಿ ಕಠಿಣ ಶಿಕ್ಷೆಗೆ ಗುರುಪಡಿಸಬೇಕೆಂದು ಬಿಎಸ್‌ಪಿ ಒತ್ತಾಯಿಸುತ್ತದೆ. ಈ ಘಟನೆಯನ್ನು ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕುಮಾರಿ ಅಕ್ಕ ಮಾಯಾವತಿ ಜೀ ಯವರು ತೀವ್ರವಾಗಿ ಖಂಡಿಸಿ, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆಗೆ ಗುರುಪಡಿಸಬೇಕೆಂದು ಒತ್ತಾಯಸಿದ್ದಾರೆ.

ಮಣಿಪುರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಬಿರೆನ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣಿ ವೇಳೆ ಡಬ್ಬಲ್‌ ಇಂಜಿನ್‌ ಸರ್ಕಾರಕ್ಕೆ ಮತ ನೀಡುವಂತೆ ಪ್ರಧಾನಮಂತ್ರಿ ಯಾಗಿ ಅಬ್ಬರದ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಮೇಲ್ದಂಡ ರೀತಿಯಲ್ಲಿ ಕುಕಿ ಸಮುದಾಯದ ವಿರುದ್ಧ ಹಿಂಸಾಚಾರ ನಿಲ್ಲಸದೆ ಮೈತೇಯಿ ಸಮುದಾಯದ ಪರವಾಗಿ ಪಕ್ಷಪಾತದಿಂದ ಮುಖ್ಯಮಂತ್ರಿಯು ಕಾರ್ಯನಿರ್ವಹಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಅತ್ಯಾಚಾರಗಳು, ನೂರಾರು ಕೊಲೆಗಳು ನಡೆದಿಲ್ಲವೇ ಎಂದು ಹೇಳುವ ಮೂಲಕ ಈ ಘಟನೆಯನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿರುವುದು ಖಂಡನೀಯ. ಹೀಗಿರುವಾಗ ಅಲ್ಪಸಂಖ್ಯಾತ ಕುಕಿ ಜನರಿಗೆ ಈತನು ನ್ಯಾಯ ರಕ್ಷಣಿ ಕೊಡಲು ಸಾಧ್ಯವೆ? ಮಣಿಪುರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿರೆನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸುತ್ತೇವೆ. ಇವರು ರಾಜಿನಾಮೆ ಕೊಡದಿದ್ದರೆ, ರಾಜ್ಯಪಾಲರು ಇವರನ್ನು ಮುಖ್ಯಮಂತ್ರಿ ಪದವಿಯಿಂದ ವಜಾಗೊಳಸುವಂತೆ ಒತ್ತಾಯಿಸುತ್ತೇವೆ .

ಭಾರತ ದೇಶವು ಬಹುಭಾಷೆ, ಬಹುಜಾತಿ, ಬಹುಧರ್ಮ, ಬಹು ಸಂಸ್ಕೃತಿಯನ್ನು ಹೊಂದಿದ ದೇಶ. ಭಾರತದೇಶದಲ್ಲಿರುವ 140 ಕೋಟಿ ಜನರ ಪ್ರಾಣ, ಆಸ್ತಿ, ಮಾನ ರಕ್ಷಣೆ ಮಾಡುವುದು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕ‌ರವರು ಬರೆದ ಸಂವಿಧಾನದ ಆಶಯವಾಗಿದೆ. ಇಷ್ಟೆಲ್ಲಾ ಅಮಾನುಷ ಕೃತ್ಯಗಳು ಕಳೆದ 80 ದಿನಗಳಿಂದ ನಡೆಯುತ್ತಿದ್ದರೂ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಕಣ್ಣುಮುಚ್ಚಿ ಕುಳತಿರುವುದು ನಾಚಿಕೆಗೇಡು. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಬಿಎಸ್‌ಪಿ ಒತ್ತಾಯಿಸುತ್ತದೆ. ಈ ಕುರಿತು ಘನವೆತ್ತ ರಾಷ್ಟ್ರಪತಿಗಳು ಮಣಿಪುರ ರಾಜ್ಯದ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!