ತುಮಕೂರು : ಬರುವ ಫೆಬ್ರವರಿ 1ರಿಂದ ಕೊಬ್ಬರಿ ಬೆಳೆಯುವ ರಾಜ್ಯದ ಏಳು ಜಿಲ್ಲೆಗಳಲ್ಲಿ ರೈತರಿಂದ ಪ್ರತಿ ಕ್ವಿಂಟಲ್ಗೆ 12 ಸಾವಿರ ರೂ. ಬೆಂಬಲ ಬೆಲೆಯಂತೆ 62,500 ಮೆಟ್ರಿಕ್ ಟನ್ ಉಂಡೆಕೊಬ್ಬರಿ ಖರೀದಿಸಲು ಕೇಂದ್ರ ಸರಕಾರ ಆದೇಶಿಸಿದೆ. ಮತ್ತೊಂದೆಡೆ ರಾಜ್ಯ ಸರಕಾರ 1500 ರೂ. ಪ್ರೋತ್ಸಾಹಧನ ನೀಡುತ್ತಿರುವುದರಿಂದ ರೈತರಿಗೆ ಕ್ವಿಂಟಾಲ್ ಕೊಬ್ಬರಿಗೆ ಒಟ್ಟು 13,500 ರೂ. ದೊರೆಯಲಿದೆ.
ರೈತರ ಪಹಣಿ ಪಡೆದು ನಾಫೆಡ್ಗೆ ಕೊಬ್ಬರಿ ಬಿಡುತ್ತಿದ್ದ ಮಧ್ಯವರ್ತಿಗಳ ಹಾವಳಿ ತಡೆಯಲು ಇದೀಗ ಮೊದಲ ಬಾರಿಗೆ ನಾಫೆಡ್ ಮೂಲಕ ರೈತರಿಂದಲೇ ನೇರವಾಗಿ ಕೊಬ್ಬರಿ ಖರೀದಿ ಮಾಡುವ ಪ್ರಕ್ರಿಯೆಗೂ ಬಯೋಮೆಟ್ರಿಕ್ ಅಳವಡಿಸಲು ಸರಕಾರ ಸೂಚಿಸಿದೆ. ಆದ್ದರಿಂದ ಕೊಬ್ಬರಿ ಖರೀದಿ ನೋಂದಣಿಗೆ ಪ್ರಥಮ ಬಾರಿಗೆ ಬಯೋಮೆಟ್ರಿಕ್ ಅಳವಡಿಸುತ್ತಿರುವುದರಿಂದ ರೈತರೇ ಸ್ವತಃ ಬಂದು ಬೆರಳಚ್ಚು ನೀಡಿ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿ ಟೋಕನ್ ಪಡೆಯಬೇಕಿದೆ.
ಮಾನದಂಡ ಬದಲಿಸಲು ರೈತರ ಆಗ್ರಹ:
ನಾಫೆಡ್ನವರು ಉಂಡೆ ಕೊಬ್ಬರಿ 70 ಎಂ.ಎಂ. ಮತ್ತು ಅದಕ್ಕೂ ಹೆಚ್ಚಿನ ಗಾತ್ರದ ಕೊಬ್ಬರಿಯನ್ನು ಮಾತ್ರ ಖರೀದಿಸಲಿದ್ದು ಕಡಿಮೆ ಅಳತೆಯ ಹಾಗೂ ಹೋಳು, ಚೂರು ಕೊಬ್ಬರಿಯನ್ನು ಖರೀದಿಸುವುದಿಲ್ಲ. ಇದರಿಂದ ರೈತರು ತಾವು ಬೆಳೆದ ಶೇ.50ರಷ್ಟು ಕೊಬ್ಬರಿಯನ್ನು ಮತ್ತೆ ಮಾರುಕಟ್ಟೆಗೆ ಮಾರಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಇತ್ತೀಚೆಗೆ ತಿಪಟೂರು ಎಪಿಎಂಸಿಗೆ ಭೇಟಿ ನೀಡಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ನಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಅಳವಡಿಸಿರುವ ಮಾನದಂಡ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅದನ್ನು ತೆಗೆದು ಹಾಕಬೇಕು ಎಂದು ರೈತರು ಆಗ್ರಹಿಸಿದರು. ಮುಂಬರುವ ಅಧಿವೇಶನ ಸಮಯದಲ್ಲಿತಿಪಟೂರಿನಿಂದ ದಾಖಲೆಗಳೊಂದಿಗೆ ನಿಯೋಗ ಬಂದರೆ ಕೃಷಿ ಸಚಿವ ಹಾಗೂ ಮುಖ್ಯಮಂತ್ರಿಗಳೊಂದಿಗೆ ಈ ವಿಷಯವಾಗಿ ಚರ್ಚಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.