ಕೇರಳ : ಬಿಜೆಪಿ (BJP) ಮುಖಂಡ ಹಾಗೂ ವಕೀಲ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ 15 ಪಿಎಫ್ಐ ಕಾರ್ಯಕರ್ತರಿಗೆ (PFI Activists) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ (ಒಂದು) ವಿ.ಜಿ.ಶ್ರೀದೇವಿ ಶಿಕ್ಷೆ ಪ್ರಕಟಿಸಿದ್ದು, ಆರೋಪಿಗಳು ಯಾವುದೇ ರೀತಿಯ ಕರುಣೆಗೂ ಅರ್ಹರಲ್ಲ ಎಂದು ತೀರ್ಪು ನೀಡಿದರು.
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ನಿಸಾಮ್, ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಮಣ್ಣಂಜೇರಿ ಞರವೇಲಿ ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರಫುದ್ದೀನ್, ಮನ್ಷಾದ್, ಜಸೀಬ್ ರಾಜ, ನವಾಸ್, ಸಮೀರ್, ನಸೀರ್, ಝಕೀರ್ ಹುಸೈನ್, ಷಾಜಿ, ಶೆರ್ನಾಝ್ ಅಶ್ರಫ್ ಆರೋಪಿಗಳು. 10ನೇ ಆರೋಪಿ ನವಾಜ್ ಅನಾರೋಗ್ಯದಿಂದ ಬಳಲುತ್ತಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ತಿಂಗಳ 20 ರಂದು ಎಲ್ಲಾ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿತು. ಬಳಿಕ ಆರೋಪಿಗಳ ವಾದವನ್ನು ಆಲಿಸಿದ ಬಳಿಕ ಶಿಕ್ಷೆ ಪ್ರಕಟಿಸುವ ದಿನಾಂಕವನ್ನು ಇಂದಿಗೆ ಮುಂದೂಡಲಾಯಿತು. ಇಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆಂಗನ್ನೂರು ಮತ್ತು ಕಾಯಂಕುಳಂ ಡಿವೈಎಸ್ಪಿಗಳು ನ್ಯಾಯಾಲಯದಲ್ಲಿ ಭದ್ರತೆ ಒದಗಿಸಿದರು. ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ.
ಪ್ರಕರಣದ ವಿವರ:
2012ರ ಡಿಸೆಂಬರ್ 19ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಅರೋಪಿಗಳು ಕುಟುಂಬ ಸದಸ್ಯರ ಎದುರೇ ಕೊಚ್ಚಿ ಕೊಲೆ ಮಾಡಿದ್ದರು. ಆಲೆಪ್ಪಿ ಜಿಲ್ಲೆಯಲ್ಲಿ ನಡೆದ 3 ಸರಣಿ ರಾಜಕೀಯ ಕೊಲೆಗಳಲ್ಲಿ ಕೊನೆಯದಾಗಿ ರಂಜಿತ್ ಕೊಲೆಯಾಗಿತ್ತು. ವಯಲಾರ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಆರ್.ನಂದುಕೃಷ್ಣ ಹತ್ಯೆಯಾದ ಮೊದಲ ವ್ಯಕ್ತಿ. ನಂತರ ಮಣ್ಣಂಜೇರಿಯಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಕೊಲೆಯಾಗಿತ್ತು. ಇದರ ಮರುದಿನ ಬೆಳಗ್ಗೆ ರಂಜಿತ್ ಕೊಲೆಯಾಗಿತ್ತು.