ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಅಳವಡಿಸಬೇಕಿದ್ದು, ಎಲ್ಲರೂ ಅದನ್ನು ಅನುಷ್ಠಾನಗೊಳಿಸಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಕೈಗಾರಿಕಾ ಮತ್ತು ವಾಣಿಜ್ಯ ಸಂಘ-ಸಂಸ್ಥೆಯ ಪ್ರತಿನಿಧಿಗಳಿಗೆ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ(FKCCI)ಯು ಕೈಗಾರಿಕಾ ಮತ್ತು ವಾಣಿಜ್ಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆಯನ್ನು ಏರ್ಪಡಿಸಿದರು. ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವ ಕುರಿತು ಈಗಾಗಲೇ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ಗಳಲ್ಲಿನ 40 ಅಡಿ ರಸ್ತೆಗಳಲ್ಲಿರುವ ಮಳಿಗೆಗಳನ್ನು ಸರ್ವೇ ಮಾಡಿ ತಿಳುವಳಿಕೆ ಪತ್ರ ನೀಡಿ ನಾಮಫಲಕಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ.
ಅದರಂತೆ ಈಗಾಗಲೇ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಅಳವಡಿಸುವ ಕಾರ್ಯ ನಗರದಾದ್ಯಂತ ಸಕ್ರಿಯವಾಗಿ ನಡೆಯುತ್ತಿದ್ದು, ಫೆಬ್ರವರಿ 28 ರೊಳಗಾಗಿ ಎಲ್ಲಾ ಮಳಿಗೆಗಳು ಕನ್ನಡ ನಾಮಫಲಕಗಳನ್ನು ಅಳವಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ ಎಂದು ಹೇಳಿದರು.
ನಗರಲ್ಲಿ ಸಾಕಷ್ಟು ಕೈಗಾರಿಕೆಗಳು ಬರಲಿದ್ದು, ಎಲ್ಲಾ ಕೈಗಾರಿಕೆಗಳು ನಿಯಮಗಳನ್ನು ತಪ್ಪದೆ ಪಾಲನೆ ಮಾಡಿ ಕೂಡಲೆ ಶೇ. 60 ರಷ್ಟು ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅಳವಡಿಸಿಕೊಳ್ಳಬೇಕು. ಫೆಬ್ರವರಿ 28 ರವರೆಗೆ ಅವಕಾಶ ನೀಡಿದ್ದು, ಆ ವೇಳೆಗೆ ಎಲ್ಲರೂ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.