ಬಾಗಲಕೋಟೆ : ಆದಿ ಪರಮೇಶ್ವರಿ ನಿನ್ನ ಪಾದಕೆ ಶಂಭೋಕು ಎಂಬ ಸಾವಿರಾರು ಜನ ಭಕ್ತರ ಉದ್ಘೋಷಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಬನಶಂಕರಿ ದೇವಿ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಜಾತ್ರೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು.
ಇನ್ನು ಪಲ್ಲಕ್ಕಿಯಲ್ಲಿ ಬನಶಂಕರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಸಕಲ ಮಂಗಲ ವಾದ್ಯಗಳೊಂದಿಗೆ ದೇವಿಯ ಪಾದಗಟ್ಟಿಯವರೆಗೆ ಮೆರವಣಿಗೆ ನಡೆಸಲಾಯಿತು. ಇತ್ತ ಸಂಜೆ ಗೋಧೂಳಿ ಮುಹೂರ್ತದ ವೇಳೆಗೆ ಪಲ್ಲಕ್ಕಿಯಲ್ಲಿ ವೇದ ಘೋಷಗಳೊಂದಿಗೆ ಬನಶಂಕರಿ ದೇವಿಯ ಉತ್ಸವ ಮೂರ್ತಿಯನ್ನು ತಂದು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ, ಭಕ್ತರು ” ಶಂಭುಕೋ,ಬನಶಂಕರಿ ನಿನ್ನ ಪಾದುಕೆ ಶಂಭುಕೋ ” ಎನ್ನುತ್ತಾ ರಥೋತ್ಸವದಲ್ಲಿ ಪಾಲ್ಗೊಂಡರು.
ಇನ್ನು ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತ ಸಮೂಹ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿಯನ್ನು ಅರ್ಪಿಸಿದರು. ಇನ್ನು ಜಾತ್ರೆ ನಿಮಿತ್ಯ ನಿರಂತರ ಐದು ದಿನಗಳ ಕಾಲ ನಾಟಕ, ರಸಮಂಜರಿ ಸೇರಿದಂತೆ ವಿಶೇಷ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.