ನವದೆಹಲಿ : ಹೊಸ ಸಂಸತ್ ಭವನದಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಹೊಸ ಸಂಸತ್‌ನಲ್ಲಿ ನನ್ನ ಮೊದಲ ಭಾಷಣ ಎಂದು ಸ್ಮರಿಸಿದ್ದಾರೆ. ಇಂದಿನಿಂದ ಬಜೆಟ್ ಅಧಿವೇಶನ ಹಿನ್ನೆಲೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದರು, ಹೊಸ ಸಂಸತ್ ‘ಏಕ ಭಾರತ್ ಶ್ರೇಷ್ಠ ಭಾರತ’ದ ಪರಿಕಲ್ಪನೆ ಇದೆ. ಭಾರತದ ಭವಿಷ್ಯದ ಕನಸುಗಳಿವೆ, ನಮ್ಮ ಸಂಸ್ಕೃತಿಗಳಿವೆ. ಇಲ್ಲಿ ಭಾರತದ ಉಜ್ವಲ ಭವಿಷ್ಯ ನಿರ್ಮಾಣವಾಗಲಿದೆ ಎಂದು ಭಾವಿಸುತ್ತೇನೆ. ಎಲ್ಲ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಅವರ ಭಾಷಣದ ಹೈಲೈಟ್ ಇಂತಿದೆ:
*ನಮ್ಮ ಸರ್ಕಾರ ಇಲ್ಲಿಯವರೆಗೆ ಅಭಿವೃದ್ಧಿಯಿಂದ ದೂರವಿದ್ದವರ ಬಗ್ಗೆ ಕಾಳಜಿ ವಹಿಸಿದೆ. ಕಳೆದ 10 ವರ್ಷಗಳಲ್ಲಿ, ಸಾವಿರಾರು ಬುಡಕಟ್ಟು ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ತಲುಪಿಸಿದೆ. ಲಕ್ಷಾಂತರ ಬುಡಕಟ್ಟು ಕುಟುಂಬಗಳು ಇದೀಗ ಪೈಪ್‌ಲೈನ್‌ಗಳ ಮೂಲಕ ಶುದ್ಧ ನೀರನ್ನು ಪಡೆಯಲು ಪ್ರಾರಂಭಿಸಿವೆ. ಕೇಂದ್ರ ಸರ್ಕಾರವು ಸಾವಿರಾರು ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಿಗೆ 4G ಇಂಟರ್ನೆಟ್ ಸಂಪರ್ಕವನ್ನು ಒದಗಿಸಿದೆ. ಬುಡಕಟ್ಟು ಕುಟುಂಬಗಳಲ್ಲಿ, ಹಲವಾರು ತಲೆಮಾರುಗಳು ಸಿಕಲ್ ಸೆಲ್ ಅನೀಮಿಯಾದಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಪ್ರಥಮ ಬಾರಿಗೆ ರಾಷ್ಟ್ರೀಯ ಮಿಷನ್ ಆರಂಭಿಸಲಾಗಿದೆ. ಇದುವರೆಗೆ ಸುಮಾರು 1.40 ಕೋಟಿ ಜನರು ಇದರ ಅಡಿಯಲ್ಲಿ ತಪಾಸಣೆಗೊಳಪಟ್ಟಿದ್ದಾರೆ.
*ಕಳೆದ ವರ್ಷಗಳಲ್ಲಿ, ಜಗತ್ತು ಎರಡು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಿದೆ ಮತ್ತು ಕರೋನಾನಂತಹ ಸಾಂಕ್ರಾಮಿಕವನ್ನು ಎದುರಿಸಿತು. ಅಂತಹ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತ ಸರ್ಕಾರವು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ ಮತ್ತು ಸಾಮಾನ್ಯ ಭಾರತೀಯರ ಹೊರೆ ಹೆಚ್ಚಾಗಲು ಬಿಡಲಿಲ್ಲ.
*ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವು ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು ಎಂಬ ನಾಲ್ಕು ಬಲವಾದ ಸ್ತಂಭಗಳ ಮೇಲೆ ನಿಂತಿದೆ ಎಂದು ನನ್ನ ಸರ್ಕಾರ ನಂಬುತ್ತದೆ.
*ಕಳೆದ 10 ವರ್ಷಗಳಲ್ಲಿ, ದಶಕಗಳಿಂದ ದೇಶದ ಜನರು ಕಾಯುತ್ತಿದ್ದ ರಾಷ್ಟ್ರೀಯ ಹಿತಾಸಕ್ತಿಯ ಹಲವಾರು ಕಾರ್ಯಗಳನ್ನು ಭಾರತವು ಪೂರ್ಣಗೊಳಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಶತಮಾನಗಳಿಂದಲೂ ಕಾಯಲಾಗಿತ್ತು. ಇಂದು ಅದು ಪೂರೈಸಿದೆ. ಜಮ್ಮು-ಕಾಶ್ಮೀರದಿಂದ ಆರ್ಟಿಕಲ್ 370 ರದ್ದತಿ ಈಗ ಇತಿಹಾಸವಾಗಿದೆ.
*”ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ್ ಭಾರತ್” ನಮ್ಮ ಶಕ್ತಿಯಾಗಿವೆ. ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನೆಯು 1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ.
*ಇಂದು ನಾವು ಕಾಣುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಕ್ರಮಗಳ ವಿಸ್ತರಣೆಯಾಗಿದೆ. ನಾವು ಬಾಲ್ಯದಿಂದಲೂ ‘ಗರೀಬಿ ಹಠಾವೋ’ ಘೋಷಣೆಯನ್ನು ಕೇಳಿದ್ದೇವೆ, ಇಂದು, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸುವುದನ್ನು ನೋಡುತ್ತಿದ್ದೇವೆ.