ನವದೆಹಲಿ : ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ನ್ನು ಇಂದು ಮಂಡನೆ ಮಾಡಿದ್ದು, ಈ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅಲ್ಲದೆ, 2019ರಿಂದ ಈವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಸತತ ಐದು ಬಜೆಟ್‌ಗಳನ್ನು ಮಂಡಿಸಿರುವ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಹಾಗೂ ಯಶವಂತ್ ಸಿನ್ಹಾ ಅವರ ದಾಖಲೆಗಳನ್ನೂ ನಿರ್ಮಲಾ ಸೀತಾರಾಮನ್ ಅವರು ಮುರಿದಿದ್ದಾರೆ. ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಆಗಿದ್ದು, ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್ ಆಗಿರದೆ ಮಧ್ಯಂತರ ಬಜೆಟ್ ಆಗಿದೆ.
ಆರ್ಥಿಕ ವರ್ಷದ ಬಜೆಟ್ ಮಂಡಿಸಿಲು ಅವರು ತಗೆದುಕೊಂಡಿದ್ದ ಕೇವಲ 1 ಗಂಟೆ ಮಾತ್ರ ಇದು ಅತಿ ಕಡಿಮೆ ಅವಧಿಯ ಬಜೆಟ್ ಮಂಡನೆ ಎಂದರೆ ತಪ್ಪಾಗಲಾರದು. ಅತಿ ದೊಡ್ಡ ಬಜೆಟ್ ಭಾಷಣದ ಹೆಗ್ಗಳಿಯೂ ಅವರದ್ದೇ ಆಗಿದೆ. 2023ರಲ್ಲಿ ಕೇವಲ 87 ನಿಮಿಷಗಳನ್ನು ತೆಗೆದುಕೊಂಡಿದ್ದರು. 2020ರಲ್ಲಿ ಬರೋಬ್ಬರಿ 2 ಗಂಟೆ 45 ನಿಮಿಷಗಳ ದೀರ್ಘಕಾಲದ ಬಜೆಟ್ ಮಂಡಿಸಿದ್ದರು.
ತಮ್ಮ ಪ್ರಕಟಣೆಯ ನಡುವೆ ಬ್ರೇಕ್ ತೆಗೆದುಕೊಂಡು ನೀರು ಕುಡಿದು ಬಳಿಕ ಬಜೆಟ್ ಓದುವುದನ್ನು ಮುಂದುವರೆಸಿದ್ದರು. ಬಜೆಟ್ ಮಂಡನೆಯ ಇತಿಹಾಸದಲ್ಲಿ ಅಷ್ಟು ದೀರ್ಘಾವಧಿಯ ಭಾಷಣವನ್ನು ಯಾರೂ ಮಾಡಿರಲಿಲ್ಲ ಎಂದು ಹೇಳಲಾಗಿತ್ತು. ಇದೀಗ ಅವರು ಕೇವಲ 1 ಗಂಟೆಗಳ ಕಾಲ ಬಜೆಟ್ ಮಂಡಿಸಿರುವುದು ಆಶ್ಚರ್ಯ ಮೂಡಿಸಿದೆ. 2022ರಲ್ಲಿ 92 ನಿಮಿಷಗಳ ಬಜೆಟ್ ಮಂಡಿಸಿದ್ದರು.