ತುಮಕೂರು : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಕಾರ್ಯತಂತ್ರ ರೂಪಿಸಲು ಶುರು ಮಾಡಿದ್ದು, ಈಗಾಗಲೇ ಆಯಾಯ ಕ್ಷೇತ್ರಗಳಿಗೆ ಸಂಬಂಧಪಟ್ಟ ರಾಜಕಾರಣಿಗಳು ತಮ್ಮ ನೆಚ್ಚಿನ ಪಕ್ಷದಿಂದ ಟಿಕೆಟ್ ಗಿಟ್ಟಿಸಲು ಪ್ಲಾನ್ ಮಾಡುತ್ತಿದ್ದಾರೆ.
ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದ ಮಾಜಿ ಸಚಿವ ವಿ ಸೋಮಣ್ಣ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡಿದ್ದು, ಲೋಕಸಭೆಯಲ್ಲಿ ತಮ್ಮ ಅದೃಷ್ಠ ಪರೀಕ್ಷೆ ಮಾಡಲು ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ವಾರ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬೆನ್ನಲ್ಲೇ ವಿ ಸೋಮಣ್ಣ ಅವರು ತುಮಕೂರು ಜಿಲ್ಲೆಯಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
ಮಾಜಿ ಸಚಿವ ವಿ ಸೋಮಣ್ಣ ಅವರು ತುಮಕೂರು ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದು, ತೆರೆ ಮರೆಯಲ್ಲಿ ಜಿಲ್ಲೆಯ ಲಿಂಗಾಯತ, ಗೊಲ್ಲ, ಒಕ್ಕಲಿಗ ಸಮುದಾಯದ ನಾಯಕರು ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಮಾಡಿ ಮನವೊಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸಮುದಾಯದ ನಾಯಕರುಗಳ ಮನೆಗಳಿಗೆ ಭೇಟಿ ನೀಡಿ ಸೋಮಣ್ಣ ಮಾತುಕತೆ ನಡೆಸುತ್ತಿದ್ದು, ರಾಜಕೀಯ ಮುಖಂಡರ ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಎರಡು ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿವೆ. ಆ ಮೂಲಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಪ್ಲಾನ್ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಮೊದಲಿಗೆ ಭೇಟಿ ಮಾಡಿ ಅವರ ಮನವೊಲಿಸಿದ್ದಾರೆ.
ಈ ಮಧ್ಯೆ ವಿ ಸೋಮಣ್ಣ ಅವರು, ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮುಂದಿನ ಕಾರ್ಯಗಳಿಗೆ ಮುಂದಡಿಯಿಟ್ಟಿದ್ದಾರೆ. ವಿ.ಸೋಮಣ್ಣಗೆ ತುಮಕೂರು ಸಂಸದ ಜಿ.ಎಸ್ ಬಸವರಾಜು ಸಾಥ್ ನೀಡಿದ್ದು, ನಾಯಕರ ಮನೆಗೆ ಭೇಟಿ ನೀಡಿ ಲೋಕಸಭೆ ಚುನಾವಣೆ ಸಂಬಂಧ ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿ.ಸೋಮಣ್ಣ ಗ್ರೌಂಡ್ ವರ್ಕ್ ಶುರು ಮಾಡಿದ್ದಾರೆ.
ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ವಿ.ಸೋಮಣ್ಣ ನೋಣವಿನಕೆರೆ ಕಾಡು ಸಿದ್ದೇಶ್ವರ ಮಠಕ್ಕೂ ಭೇಟಿ ನೀಡಿದ್ದು, ಬಳಿಕ ಗುಬ್ಬಿ ಕ್ಷೇತ್ರದ ಲಿಂಗಾಯತ ಸಮುದಾಯದ ನಾಯಕರ ಮನೆಗಳಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ವಿ.ಸೋಮಣ್ಣ ನಡೆ ಕುತೂಹಲ ಮೂಡಿಸಿದ್ದು, ಒಳಗೊಳಗೆ ಚುನಾವಣೆಗೆ ಅಖಾಡ ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ.