ಬೆಂಗಳೂರು: ಕೋವಿಡ್ ನಿರ್ವಹಣೆಗೆ ನಾವು ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ದರಿದ್ದೇವೆ. ಎಲ್ಲರಿಗೂ ಲಸಿಕೆ ಕೊಡಬೇಕು. ಈಗ ಸತ್ತಿರೋರಲ್ಲಿ ಎಲ್ಲರೂ 40-50 ವರ್ಷದ ಒಳಗಿನವರೇ. ಇವಾಗ 45 ವರ್ಷ ಮೇಲ್ಪಟ್ಟವರಿಗೆ ಕೊಡಿ ಅಂತಾರೆ. ನನ್ನ ಪ್ರಕಾರ ಎಲ್ಲ ವಯಸ್ಸಿನವರಿಗೂ ಲಸಿಕೆ ಕೊಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ರಾಜೀನಾಮೆ ಕೇಳ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಬಂಡ್ರು, ಅವರೆಲ್ಲಿ ರಾಜೀನಾಮೆ ಕೊಡುತ್ತಾರೆ. ನಾನು ಯಾರ ವಿಷಯದಲ್ಲೂ ಸಾಫ್ಟ್ ಕಾರ್ನರ್ ಇಲ್ಲ. ಆರೋಗ್ಯ ಸಚಿವ ಸೇರಿದಂತೆ ಇಡೀ ಸರ್ಕಾರ ವೈಫಲ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಸಾವಿನ ಅಂಕಿ ಅಂಶದ ಲೆಕ್ಕದ ಬಗ್ಗೆ ಮುಚ್ಚಿಡುತ್ತಿದೆ. ಕೊರೊನಾ ಬಂದವರ ಬಗ್ಗೆಯೂ ಲೆಕ್ಕ ಕೊಡುತ್ತಿಲ್ಲ. ಸಾವಿನ ಬಗ್ಗೆಯೂ ಸರಿಯಾಗಿ ಲೆಕ್ಕ ಕೊಡುತ್ತಿಲ್ಲ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದರು.
ನಾನು ಮನೇಲಿದ್ರು ಮಾಸ್ಕ್ ಹಾಕೊಳ್ಳಿ ಅಂತೀನಿ. ನಮ್ಮ ಅಡುಗೆ ಮನೆಯವರಿಗೆಲ್ಲಾ ಒಂದು ಸಲ ಕೊರೊನಾ ಬಂದ್ಬಿಟ್ಟಿತ್ತು. ಇವಾಗ ಅವರಿಗೆ ಮಾಸ್ಕ್ ಕೊಟ್ಟು, ಲಸಿಕೆ ಕೊಡಿಸುತ್ತಿದ್ದೇನೆ. ಮನೆಯಲ್ಲಿದ್ರು ಮಾಸ್ಕ್ ಧರಿಸಬೇಕು. ಜನರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಮಾಜಿ ಸಿಎಂ ಧರಂ ಸಿಂಗ್ ಅವರ ಪತ್ನಿಗೂ ಕೋವಿಡ್ ಬಂದು ಹಾಸಿಗೆ ಸಿಗಲಿಲ್ಲ. ಅವರಿಗೂ ನಾನೇ ರೆಫರ್ ಮಾಡಿ ಹಾಸಿಗೆ ಕೊಡಿಸಬೇಕಾಯ್ತು. ಹಾಸಿಗೆಗೂ ರೆಫರ್ ಮಾಡ್ಬೇಕು ಅಂದ್ರೆ ಹೇಗೆ..? ಸಾಮಾನ್ಯ ಜನರ ಸ್ಥಿತಿ ಹೇಗೆ..? ಎಂದು ಪ್ರಶ್ನಿಸಿದ್ದಾರೆ.