ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದೆ.
ದೆಹಲಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ 4 ವಿಕೆಟ್ ಗೆ 171 ರನ್ ಗಳಿಗೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್ ಗೆ 49 ರನ್ ಜೊತೆಯಾಟ ನಿಭಾಯಿಸಿದರು. ಕ್ವಿಂಟನ್ ಡಿ ಕಾಕ್ 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 70 ರನ್ ಬಾರಿಸಿ ಔಟಾಗದೇ ಉಳಿದರು.
ರೋಹಿತ್ (14), ಕೃನಾಲ್ ಪಾಂಡ್ಯ (39), ಸೂರ್ಯಕುಮಾರ್ ಯಾದವ್ (16), ಕೀರನ್ ಪೊಲಾರ್ಡ್ (16) ರನ್ ಗಳ ಕೊಡುಗೆ ನೀಡಿದರು. ರಾಜಸ್ಥಾನ್ ಪರ ಕ್ರಿಸ್ ಮೊರಿಸ್ 2 ವಿಕೆಟ್ ಗಳಿಸಿದರು.