ಹಾಸನ: ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಸನ ಜಿಲ್ಲೆಗೆ ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್ಪಿಆರ್ಎಫ್) ಸೋಮವಾರವೇ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಶನಿವಾರ ಹಾಸನ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಪತ್ತು ನಿಧಿಯಿಂದ ಎಲ್ಲ ಜಿಲ್ಲೆಗಳಿಗೆ 260 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಹಾಸನಕ್ಕೆ ಮೊದಲ ಹಂತದಲ್ಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು, ಈಗ ಎರಡನೇ ಹಂತದಲ್ಲಿ 10 ಕೋಟಿ ಕೊಡಲಾಗುವುದು ಎಂದರು.
ಜಿಲ್ಲೆಯಲ್ಲಿ ಆಮ್ಲಜನಕ, ರೆಮಿಡಿಸಿವಿರ್, ಬ್ಲ್ಯಾಕ್ ಫಂಗಸ್ ಔಷಧಿ ಸೇರಿದಂತೆ ಕೋವಿಡ್ಗೆ ಸಂಬಂಧಿಸಿದ ಯಾವ ಔಷಧಿಯೂ ಕೊರತೆ ಆಗದಂತೆ ನೋಡಿಕೊಳ್ಳಲು ಅಗತ್ಯಬಿದ್ದರೆ ಇನ್ನಷ್ಟು ಹಣಕಾಸು ಸಂಪನ್ಮೂಲವನ್ನು ಸರಕಾರ ಒದಗಿಸಲಿದೆ. ಕೋವಿಡ್ ವೆಚ್ಚಕ್ಕೆ ನಿರ್ಬಂಧವಿಲ್ಲ, ಜಿಲ್ಲಾಡಳಿತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಎಷ್ಟು ಔಷಧಿಗೆ ಬೇಡಿಕೆ ಇಟ್ಟರೂ ಕೊಡಲು ಸರಕಾರ ಸಿದ್ಧವಿದೆ. ಒಂದು ವಾರಕ್ಕಾಗುವಷ್ಟು ಹೆಚ್ಚುವರಿ ಸ್ಟಾಕ್ ಇಟ್ಟುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕೂಡಲೇ 50 ವೆಂಟಿಲೇಟರ್:
ಜಿಲ್ಲೆಯಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ ಎಂಬ ಅಂಶವನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸಭೆಯಿಂದಲೇ ನಾನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದೆ, ತಕ್ಷಣವೇ 50 ವೆಂಟಿಲೇಟರ್ಗಳನ್ನು ಕಳಿಸಬೇಕು ಎಂದು ಸೂಚಿಸಿದ್ದೇನೆ. ಇದಕ್ಕೆ ಸ್ಪಂದಿಸಿದ ಅಖ್ತರ್ ಅವರು ಅಷ್ಟೂ ವೆಂಟಿಲೇಟರ್ಗಳನ್ನು ಇವತ್ತೇ ಹಾಸನಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇಷ್ಟೂ ವೆಂಟಿಲೇಟರ್ಗಳು ಹಾಸನ ಮೆಡಿಕಲ್ ಕಾಲೇಜ್ಗೆ ತಲುಪಲಿವೆ ಎಂದರು.
ಇದರ ಜತೆಗೆ ಜಿಲ್ಲೆಯ ತಮ್ಮಲ್ಲಿರುವ ಕೋವಿಡ್ ಬೆಡ್ಗಳನ್ನು ʼಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ʼ (sast) ಪೋರ್ಟಲ್ʼಗೆ ಲಿಂಕ್ ಮಾಡಿಲ್ಲ. ಇದು ಕೂಡಲೇ ಆಗಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವೈದ್ಯರ ಕಾಯಂ ನೇಮಕ:
ಹಾಸನವೂ ಸೇರಿ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಕಾಯಂ ಮಾಡುವುದು ಸೇರಿ 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು ನೇಮಕಾತಿ ಮಾಡಿಕೊಂಡು ಅವರ ಕಾರ್ಯಸ್ಥಳಕ್ಕೆ ನಿಯೋಜಿಸುವ ಕೆಲಸವನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಅಂತಿಮವಾಗಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.