ಒಂದು ದಿನದಲ್ಲಿ 7 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಬೇಕು ಎಂಬ ಗುರಿ ಹೊಂದಿದ್ದೆವು. ಆದರೆ 11 ಲಕ್ಷದ 22 ಸಾವಿರ ಮಂದಿಗೆ ಲಸಿಕೆ ಹಾಕುವ ಮೂಲಕ ದಾಖಲೆ ಬರೆಯಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಿನ್ನೆ ಒಂದೇ ದಿನ 80 ಲಕ್ಷ ಡೋಸ್ ನೀಡಲಾಗಿದೆ. ಅತೀ ಹೆಚ್ಚು ಲಸಿಕೆ ನೀಡಿದ 2ನೇ ರಾಜ್ಯ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ ಎಂದರು.
ರಾಜ್ಯದಲ್ಲಿ ಮೂರನೇ ಅಲೆಯ ಸಂಬಂಧ ವೈದ್ಯ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಜೊತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರು ನೀಡುವ ವರದಿ ಆಧರಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭದ ಬಗ್ಗೆ ಚರ್ಚೆ ನಡೆಯಬಹುದು. ಒಂದು ಬಾರಿ ಶಾಲೆ ಆರಂಭವಾದರೆ ಮತ್ತೆ ನಿಲ್ಲಿಸಲು ಸಾಧ್ಯವಿಲ್ಲ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಬೇಕಾಗುತ್ತೆ. ತುಂಬಾ ಸೂಕ್ಷ್ಮವಾದ ವಿಚಾರ ಎಂದು ಸುಧಾಕರ್ ಸ್ಪಷ್ಟಪಡಿಸಿದರು.