ಡ್ರಗ್ ಕೇಸ್ ಚಾರ್ಜ್ ಶೀಟ್ ನಲ್ಲಿ ನಟಿ ಅನುಶ್ರೀ ಹೆಸರು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಲ್ಲಿ ಬುಧವಾರ ಮಾತನಾಡಿದ ಅವರು, ಡ್ರಗ್ ಕೇಸ್ ಪ್ರಕರಣದ A2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ. ನಾನು ಕಮಿಷನರ್ ಆಗಿ ಬರುವಷ್ಟರಲ್ಲಿ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿತ್ತು. ಇಂದು ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದೆ. ಆ ಕೇಸ್ ನ ಸ್ಟೇಟಸ್ ಬಗ್ಗೆ ಮಾಹಿತಿ ಪಡೆದಿದ್ದೇನೆ. ಚಾರ್ಜ್ ಶೀಟ್ ಪ್ರಕರಣದ ಅಂತಿಮ ವರದಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಟ್ರಯಲ್ ನಡೆಯುತ್ತಿದೆ ಎಂದರು.
ಅನುಶ್ರೀ ವಿರುದ್ಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅಂದು ಪ್ರಕರಣ ದಾಖಲಿಸಲಾಗಿಲ್ಲ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ವಿಚಾರಣೆಯ ಸಾಧ್ಯತೆ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ 2007ರಲ್ಲಿ ನಡೆದಿದ್ದರಿಂದ ಮತ್ತು ಅನುಶ್ರೀ ವಿರುದ್ಧ ಸಾಕ್ಷಾಧಾರಗಳು ಇಲ್ಲದ್ದರಿಂದ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿಲ್ಲ ಅಂದರು.
ಇನ್ನು ಚಾರ್ಜ್ ಶೀಟ್ ನಲ್ಲಿರೋ ಹೇಳಿಕೆ ನನ್ನದಲ್ಲ ಅನ್ನೊ ಕಿಶೋರ್ ಶೆಟ್ಟಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಚಾರ್ಜ್ ಶೀಟ್ ವೇಳೆ ಸ್ಪಷ್ಟವಾಗಿ ಅವರಿಗೆ ಓದಿ ಹೇಳಿಸಿ ಬಳಿಕ ಸಹಿ ಪಡೆಯಲಾಗುತ್ತದೆ. ಇದು ಪ್ರತಿಯೊಂದು ಪ್ರಕರಣದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ನಾನು ಹೇಳಿಕೆ ನೀಡಿದಲ್ಲ ಅನ್ನೋದು ತಪ್ಪು. ಅದನ್ನು ನ್ಯಾಯಾಲಯದಲ್ಲಿ ಹೇಳಬಹುದಿತ್ತು ಅಂದರು.
ಇದೇ ವೇಳೆ ಅವರು ಇಂದ್ರಜೀತ್ ಲಂಕೇಶ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಪೊಲೀಸರ ತನಿಖೆ ಮೇಲೆ ಸಂಶಯ ಬೇಡ. ವಿಚಾರಣೆ ಸರಿಯಾಗಿ ನಡೆಸಿಲ್ಲ ಅನ್ನೋದು ತಪ್ಪು ಅಂದರು.