ದೇಶದಲ್ಲಿ ತೈಲ ಬೆಲೆ ತೆರಿಗೆ ಕಡಿತ ಮಾಡದೇ ಆಯಿಲ್ ಬಾಂಡ್ ನೆಪವೊಡ್ಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಆಯಿಲ್ ಬಾಂಡ್ 1.34 ಲಕ್ಷ ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದರೆ ಮೋದಿ ಸರಕಾರ ಇದರಿಂದ 24 ಲಕ್ಷ ಕೋಟಿ ರೂ. ಲಾಭ ಮಾಡಿಕೊಂಡಿದೆ. ಆದರೆ ಇದನ್ನು ಹೇಳದೇ ಅರ್ಧ ಸತ್ಯ ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.
ಕೇಂದ್ರದಲ್ಲಿನ ಬಿಜೆಪಿ ಸರಕಾರ ಸುಳ್ಳು ಹೇಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿಯವರು ಅಚ್ಚೇದಿನ ಆಯೇಂಗೆ ಅನ್ನುತ್ತಿದ್ದರು. ಒಂದು ಕಡೆ ರೈತರ ಕಾನೂನು ಹಿಂಪಡೆಯಲಿಲ್ಲ. ಅಲ್ಲದೇ ಗಡಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಯುವಕರನ್ನ ಆನೇಕ ಬಾರಿ ಪುಸಲಾಯಿಸಿದರು. ಆದರೆ ಜನರ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ. ನಮ್ಮಲ್ಲಿ ಒಡಕು ಮೂಡಿಸುವ ಕೆಲಸ ಬೇಡ. ನಾವು ಸಿದ್ಧಾಂತದ ಮೇಲೆ ಬಂದವರು. ಹಾಗಾಗಿಯೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿದ್ದು. ಸೈದ್ಧಾಂತಿಕ ತಳಹದಿಯ ಮೇಲೆ ನಿಂತವರು ನಾವು. ನಮ್ಮಲ್ಲಿ ಅಥವಾ ಮೈತ್ರಿ ಪಕ್ಷಗಳ ಜೊತೆಯಾಗಲಿ ಯಾವುದೇ ಜಗಳವೂ ಇಲ್ಲ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.