ಕೇಂದ್ರ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ದೇಶದ ಹಲವೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೋಮವಾರ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಪ್ರತಿಭಟನೆಗೆ 500 ಕ್ಕೂ ಹೆಚ್ಚು ಸಂಘಟನೆಗಳು, 15 ಕಾರ್ಮಿಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದು, ಭಾರತ್ ಬಂದ್ ಹಿನ್ನೆಲೆಯಲ್ಲಿ ರೈತರು ಘಾಜಿಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಉತ್ತರ ಪ್ರದೇಶ-ದೆಹಲಿ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 11 ಗಂಟೆಗೆ ರೈತ-ಕಾರ್ಮಿಕ ಸಂಘಟನೆಗಳು ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂಥರ್ನಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಿವೆ. ಇದರಿಂದ ಗುರ್ ಗಾಂವ್ ನಲ್ಲಿ ಸುಮಾರು 1.5 ಕಿ.ಮೀ. ಎಕ್ಸ್ ಪ್ರೆಸ್ ಹೈವೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಪಂಜಾಬ್, ಚಂಡೀಗಢ, ದೆಹಲಿ ಸಂಪರ್ಕಿಸುವ ಹರಿಯಾಣ- ಪಂಜಾಬ್ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗಿದೆ. ಹೆದ್ದಾರಿಗಳಲ್ಲಿ ನೂರಾರು ರೈತರು ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಎದುರಾಗಿದೆ. ಅಲ್ಲದೇ, ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
15 ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಫಿರೋಜ್ ಪುರ್, ಅಂಬಾಲಾ, ದೆಹಲಿ ಅಲ್ಲದೇ ಈಶಾನ್ಯ ರಾಜ್ಯಗಳ ರೈಲುಗಳಿಗೆ ರೈತರು ತಡೆ ವಿಧಿಸಿದ್ದಾರೆ.