ಬಿಬಿಎಂಪಿ ವತಿಯಿಂದ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿಗಳಿಗೆ ಸಂಬಂಧಿಸಿದ ರಸ್ತೆಗಳ ಪುನಶ್ಚೇತನ ಕಾಮಗಾರಿ ಶೀಘ್ರ ಮುಗಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರ ಅಟ್ಟೂರು ವಾರ್ಡ್ ವ್ಯಾಪ್ತಿಯ ಅನಂತಪುರ, ಎ.ಎಂ.ಎಸ್ ಲೇಔಟ್ ವ್ಯಾಪ್ತಿಯಲ್ಲಿ ರಸ್ತೆ ಪುನಶ್ಚೇತನ ಕಾರ್ಯ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ನಗರದಲ್ಲಿರುವ ರಸ್ತೆಗಳು ವಾಹನ ಸಂಚಾರಕ್ಕೆ ಸುಗಮ ರೀತಿಯಲ್ಲಿರಬೇಕು. ಈ ಪೈಕಿ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಹಾಗೂ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನಶ್ಚೇತನ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.
ಜಲಮಂಡಳಿಯಿಂದ ಕುಡಿಯುವ ನೀರು, ಒಳ ಚರಂಡಿ ಕೆಲಸ ಪೂರ್ಣಗೊಂಡು ಪಾಲಿಕೆಯಿಂದ ರಸ್ತೆ ಪುನಶ್ಚೇತನ ಕಾರ್ಯ ಪ್ರಾರಂಭಿಸುವ ಕಡೆ ಪಾದಚಾರಿ ಮಾರ್ಗ ಸೇರಿದಂತೆ ಗುಣಮಟ್ಟದ ರಸ್ತೆ ನಿರ್ಮಣ ಮಾಡಬೇಕು. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.