ಕೊರೊನಾ ವೈರಸ್ ಸೋಂಕಿನ ಮೂಲವಾದ ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ ತೀವ್ರಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿಯೇ ಚೀನಾದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ದೇಶದಲ್ಲಿ ಸುಮಾರು 3 ಕೋಟಿ ಜನರು ಲಾಕ್‌ಡೌನ್ ನಿರ್ಬಂಧಕ್ಕೆ ಒಳಪಟ್ಟಿದ್ದಾರೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ ಸಾಮೂಹಿಕ ಪರೀಕ್ಷೆಗಳು ಪುನಃ ವ್ಯಾಪಕವಾಗಿ ಶುರುವಾಗಿವೆ. ಪಿಪಿಇ ಕಿಟ್ ಧರಿಸಿರುವ ಆರೋಗ್ಯ ಅಧಿಕಾರಿಗಳು ನಗರದ ಬೀದಿ ಬೀದಿಗಳಲ್ಲಿ ತುಂಬಿಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಆರಂಭವಾದ ಸಂದರ್ಭದಲ್ಲಿ ಈ ರೀತಿಯ ಸನ್ನಿವೇಶ ಕಂಡುಬಂದಿತ್ತು.
ಹೆಚ್ಚು ಪ್ರಸರಣ ಸಾಮರ್ಥ್ಯ ಹೊಂದಿರುವ ಓಮಿಕ್ರಾನ್ ರೂಪಾಂತರಿ ತಳಿಯು ದೇಶದ ಶೂನ್ಯ- ಕೋವಿಡ್ ಕಾರ್ಯತಂತ್ರದ ಮೇಲೆ ಪ್ರಹಾರ ಮಾಡಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಾಣಿಸುತ್ತಿದ್ದಂತೆಯೇ, ಕಠಿಣ ನಿಯಮಗಳಿಗೆ ಹೆಸರಾದ ಚೀನಾ ತನ್ನ ಸ್ಥಳೀಯ ಮಟ್ಟದ ಲಾಕ್‌ಡೌನ್ ನೀತಿಗಳನ್ನು ಹೇರಿದೆ. ಎರಡು ವರ್ಷ ಹೊರ ಜಗತ್ತಿನ ಜತೆ ಬಹುತೇಕ ನಂಟು ಕಳೆದುಕೊಂಡಿದ್ದ ಚೀನಾ, ಈಗ ಓಮಿಕ್ರಾನ್ ಕಾರಣದಿಂದ ಮತ್ತೆ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತಿದೆ. ದೇಶಾದ್ಯಂತ ಕನಿಷ್ಠ 13 ನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಕೆಲವು ನಗರಗಳಲ್ಲಿ ಭಾಗಶಃ ಲಾಕ್‌ಡೌನ್ ಜಾರಿಯಲ್ಲಿದೆ.