ರಾಜ್ಯದಲ್ಲಿ ಹಲಾಲ್ ಮತ್ತು ಜಟ್ಕಾ ಕಟ್ ಪ್ರಾಣಿವಧೆ ಪದ್ಧತಿಗಳ ಬಳಕೆ ಕುರಿತ ವಿವಾದ ಭುಗಿಲೆದ್ದಿದೆ. ಹಲಾಲ್ ವಿರುದ್ಧ ಅಭಿಯಾನ ನಡೆಸುತ್ತಿರುವ ಹಿಂದುತ್ವ ಪರ ಇರುವ ಸಂಘಟನೆಗಳು ಯುಗಾದಿ ಬಳಿಕ ಹೊಸ್ತೊಡಕಿಗೆ ಹಲಾಲ್ ಮಾಂಸ ಬಹಿಷ್ಕಾರ ಹಾಕಬೇಕು ಎಂದು ಕರೆ ನೀಡಿವೆ. ಮತ್ತೊಂದೆಡೆ ಹಿಂದೂ ಹೋಟೆಲ್, ಹಿಂದೂಗಳ ಮಟನ್ ಸ್ಟಾಲ್ಗಳಲ್ಲಿ ಹಲಾಲ್ ಬೋರ್ಡ್ ತೆರವು ಅಭಿಯಾನವೂ ಆರಂಭವಾಗಿದೆ. ರಾಷ್ಟ್ರ ರಕ್ಷಣಾ ಪಡೆಯಿಂದ ಕರಪತ್ರ ಅಭಿಯಾನ ನಡೆಯುತ್ತಿದೆ.
‘ಹಲಾಲ್ ಸರ್ಟಿಫಿಕೇಟ್ ಕಡ್ಡಾಯವಲ್ಲ. ಹಲಾಲ್ ಮಾಂಸ ಬಳಕೆ ಹಿಂದೂಗಳಿಗೆ ಒಳಿತಲ್ಲ, ಅದು ಅಪಚಾರ. ತಕ್ಷಣವೇ ಅಂಗಡಿಯಲ್ಲಿನ ಹಲಾಲ್ ಬೋರ್ಡ್ ತೆರವು ಮಾಡಿ. ಹೋಟೆಲ್ಗಳಲ್ಲಿ ಹಲಾಲ್ ಮಾಂಸ ಬಳಸಬೇಡಿ’ ಎಂದು ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಪ್ರಮುಖ ಮಾಂಸಾಹಾರಿ ಹೋಟೆಲ್ ಗಳು , ರೆಸ್ಟೋರೆಂಟ್ ಗಳು ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. FSSAI ಸರ್ಟಿಫಿಕೇಟ್ ಮಾತ್ರ ಕಾನೂನು ಪ್ರಕಾರ ಕಡ್ಡಾಯ. ಹೀಗಾಗಿ ಹಿಂದೂಗಳು ಹಲಾಲ್ ಮಾರ್ಕ್ ಬಳಸಬಾರದು ಎಂದು ಆಗ್ರಹಿಸಲಾಗಿದೆ. ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರು ಇಂದು ಸಚಿವ ಉಮೇಶ್ ಕತ್ತಿ ಅವರನ್ನು ಭೇಟಿಯಾಗಿ, ಪ್ರತ್ಯೇಕ ಮಾರ್ಗಸೂಚಿಗೆ ಮನವಿ ಮಾಡಲಿದ್ದಾರೆ.