ಪಾಕ್ ಪ್ರಧಾನಿ ಇಮ್ರಾನ್ ಗೆ ಭಾರತ ಅಷ್ಟೊಂದು ಇಷ್ಟವಾಗಿದ್ದರೆ ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಲಿ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ ಉಪಾಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ಷರೀಫ್ ಹೇಳಿದ್ದಾರೆ.
ಲೋಕಸಭೆಯಲ್ಲಿ ವಿಶ್ವಾಸ ಮತ ಗೆಲ್ಲಲು ಕೇವಲ ಒಂದೇ ಒಂದು ಮತದಲ್ಲಿ ತಮ್ಮ ಸರ್ಕಾರ ವಿಫಲವಾದಾಗ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ರಾಜೀನಾಮೆ ನೀಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಕಿಕೊಟ್ಟ ಮಾರ್ಗವನ್ನು ಉದಾಹರಣೆಯಾಗಿ ನೀಡಿದ ಮರ್ಯಮ್, ಇಮ್ರಾನ್ ಖಾನ್ ಅವರ ಯೋಜನೆ ಮತ್ತು ಸಂಚಿನ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ :- ಭಾರತದ ವಿರುದ್ಧ ಮಾತನಾಡಲು ಧೈರ್ಯ ಬೇಕು – ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್ ಒಬ್ಬ ‘ಸೈಕೋಪಾಥ್‘ ಎಂದು ಟೀಕಿಸಿರುವ ಮರ್ಯಮ್, ದೇಶವನ್ನು ನೆಲಕಚ್ಚುವಂತೆ ಮಾಡಲು ಅವರಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. “ತನ್ನ ಬುದ್ಧಿ ಸ್ಥಿಮಿತದಲ್ಲಿ ಇಲ್ಲದ ಒಬ್ಬ ವ್ಯಕ್ತಿಗೆ ಅರಾಜಕತೆ ಸೃಷ್ಟಿಸಲು ಮತ್ತು ಇಡೀ ದೇಶವನ್ನು ನೆಲಕಚ್ಚಿಸಲು ಯಾವ ಕಾರಣಕ್ಕೂ ಅವಕಾಶ ನೀಡಲು ಸಾಧ್ಯವಿಲ್ಲ. ಇದು ತಮಾಷೆಯಲ್ಲ. ಆತನನ್ನು ಪ್ರಧಾನಿ ಅಥವಾ ಮಾಜಿ ಪ್ರಧಾನಿ ಎಂದು ಪರಿಗಣಿಸಬಾರದು. ಈತನನ್ನು ‘ಸೈಕೋಪಾತ್’ ಎಂದು ಪರಿಗಣಿಸಬೇಕು. ತನ್ನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಡೀ ದೇಶವನ್ನೇ ಆತ ಒತ್ತೆಯಾಳು ಇರಿಸಿಕೊಂಡಿರೋದು ನಾಚಿಕೆಗೇಡು” ಎಂದು ಟೀಕಿಸಿದ್ದಾರೆ.
ತಮ್ಮ ಪ್ರಧಾನಿ ಹುದ್ದೆ ಮತ್ತು ಸರ್ಕಾರದ ಅಸ್ತಿತ್ವ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಸ್ವಾತಂತ್ರ್ಯ ಪಡೆದಿದ್ದವು. ಆದರೆ ಪಾಕಿಸ್ತಾನವನ್ನು ಟಿಶ್ಯೂ ಪೇಪರ್ನಂತೆ ಬಳಸಿ ಬಿಸಾಡಲಾಗಿದೆ. ಇಲ್ಲಿ ರಾಜಕೀಯ ಸ್ಥಿರತೆ ಎಂಬುದೇ ಇಲ್ಲ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಯಾವ ದೇಶವೂ ಮೂಗುತೂರಿಸಲು ಸಾಧ್ಯವಿಲ್ಲ ಎಂದು ಕೊಂಡಾಡಿದ್ದರು.
ಇದನ್ನು ಓದಿ :- ಮಾಯಾವತಿಗೆ ಯುಪಿ ಸಿಎಂ ಹುದ್ದೆಯ ಆಫರ್ ನೀಡಲಾಗಿತ್ತು – ರಾಹುಲ್ ಗಾಂಧಿ