ದೇಶದ ಆರ್ಥಿಕತೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( RAHUL GANDHI ) ಭಾರತವನ್ನು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಹೋಲಿಸಿದ್ದಾರೆ.
ನಿರುದ್ಯೋಗ, ಇಂಧನ ಬೆಲೆ ಮತ್ತು ಕೋಮು ಹಿಂಸಾಚಾರಗಳ ಹೋಲಿಕೆಯಲ್ಲಿ ಎರಡೂ ದೇಶಗಳು ಒಂದೇ ರೀತಿ ಮಟ್ಟದಲ್ಲಿವೆ ಎಂಬ ನಕ್ಷೆಯನ್ನು ಅವರು ಟ್ವಿಟ್ಟರ್ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ.”ದಿಕ್ಕು ತಪ್ಪಿಸುತ್ತಿರುವ ಜನರು ವಾಸ್ತವಗಳನ್ನು ಬದಲಿಸಲು ಸಾಧ್ಯವಿಲ್ಲ. ಭಾರತವು ಶ್ರೀಲಂಕಾದಂತೆಯೇ ಕಾಣಿಸುತ್ತಿದೆ” ಎಂದು ರಾಹುಲ್ ಗಾಂಧಿ ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳ ತಲಾ ಮೂರು ಸೇರಿದಂತೆ ಒಟ್ಟು ಆರು ಗ್ರಾಫ್ ಗಳನ್ನು ಪೋಸ್ಟ್ ಮಾಡಿದ್ದಾರೆ.
2017ರಿಂದಲೂ ಎರಡೂ ದೇಶಗಳಲ್ಲಿ ನಿರುದ್ಯೋಗ ಏರಿಕೆ ಆಗುತ್ತಿರುವುದನ್ನು ಗ್ರಾಫ್ ತೋರಿಸುತ್ತದೆ. 2020ರ ಮಧ್ಯಭಾಗದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಭಾಗವಾಗಿ ಭಾರತದಲ್ಲಿ ಲಾಕ್ಡೌನ್ ಜಾರಿಯಾದ ನಂತರ ಉತ್ತುಂಗಕ್ಕೆ ಏರಿದೆ. ಅದರ ನಂತರದ ವರ್ಷ ಮತ್ತೆ ಕೊಂಚ ಇಳಿಕೆಯಾಗಿದೆ.
ಎರಡನೇ ಗ್ರಾಫ್ನಲ್ಲಿ ಭಾರತ ಮತ್ತು ಶ್ರೀಲಂಕಾದ ಪೆಟ್ರೋಲ್ ದರಗಳನ್ನು ತೋರಿಸಲಾಗಿದೆ. 2017ರಿಂದ ಏರಿಕೆಯಾಗಿದ್ದು, 2021ರಲ್ಲಿ ಮತ್ತಷ್ಟು ಹೆಚ್ಚಾಗಿದೆ. ಮೂರನೇ ಗ್ರಾಫ್ ಎರಡೂ ದೇಶಗಳಲ್ಲಿ 2020-21ರಲ್ಲಿ ಕೋಮು ಹಿಂಸಾಚಾರಗಳು ಗಣನೀಯವಾಗಿ ಹೆಚ್ಚುತ್ತಿರುವುದನ್ನು ಚಿತ್ರಿಸಿದೆ. ಇದನ್ನೂ ಓದಿ :- ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ- ಸಿಎಂ ಬೊಮ್ಮಾಯಿ