ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು
ಒಡಿಶಾದ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಸ್ಫೂರ್ತಿದಾಯಕ ಮಹಿಳೆ
ದ್ರೌಪದಿ ಮುರ್ಮು ಅವರಿಗೆ ಝಡ್ + ಭದ್ರತೆ
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ (BJP) ಅಚ್ಚರಿಯ ದಾಳ ಉರುಳಿಸಿದೆ. ಬಡುಕಟ್ಟು ಸಮುದಾಯದ ದ್ರೌಪದಿ ಮುರ್ಮು (Draupadi Murmu ) ಅವರನ್ನು ಎನ್ಡಿಎ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಸಂಚಲನ ಮೂಡಿಸಿದೆ. ಒಡಿಶಾ ಮೂಲದ ದ್ರೌಪದಿ ಮುರ್ಮು ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದರೆ, ಮುರ್ಮು ಅವರೊಂದಿಗೆ ಸ್ಪರ್ಧಿಸಬೇಕಾಗಲಿದೆ. ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಗೆ ಎನ್ಡಿಎಗೆ 13,000 ಮತಗಳ ಅಗತ್ಯವಿದೆ. ಮುರ್ಮು ಅವರು ಒಡಿಶಾದವರಾಗಿರುವುದರಿಂದ ಅಲ್ಲಿನ ಆಡಳಿತಾರೂಢ ಬಿಜೆಡಿ ಬೆಂಬಲ ಸಿಗುವುದು ಬಹುತೇಕ ಖಚಿತವಾಗಿದೆ. ಇದರಿಂದ ಮುರ್ಮು ಅವರ ಗೆಲುವು ಸುಗಮವಾಗಲಿದೆ.
ಮಯೂರ್ ಭಂಜ್ ಜಿಲ್ಲೆಯ ಕುಸುಮಿ ಬ್ಲಾಕ್ನ ಉಪಾರ್ಬೇಡ ಎಂಬ ಕುಗ್ರಾಮದಲ್ಲಿ ಸಂಟಲ್ ಬುಡಕಟ್ಟು ಕುಟುಂಬದಲ್ಲಿ 1958ರ ಜೂನ್ 20ರಂದು ಜನಿಸಿದ ದ್ರೌಪದಿ ಮುರ್ಮು ಅವರ ಜೀವನ ದುರಂತಮಯವಾಗಿದೆ. ಕಡುಬಡತನ ನೂರಾರು ಸಂಕಷ್ಟಗಳ ನಡುವೆಯೇ ಅವರು ಬೆಳೆದುನಿಂತ ಪರಿ ಅಚ್ಚರಿ ಹಾಗೂ ಸ್ಫೂರ್ತಿದಾಯಕವಾಗಿದೆ. ಇದನ್ನೂ ಓದಿ : – ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪ – 255 ಮಂದಿ ಸಾವು – 500 ಮಂದಿಗೆ ಗಾಯ
1997ರಲ್ಲಿ ಕೌನ್ಸಿಲರ್ ಆಗಿ ರಾಜಕೀಯ ವೃತ್ತಿಗೆ ಕಾಲಿರಿಸುವ ಮುನ್ನ ಅವರು ಶಿಕ್ಷಕಿಯಾಗಿದ್ದರು. ಭುವನೇಶ್ವರದಲ್ಲಿ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಮುರ್ಮು, ಬಿಎ ಪದವಿ ಪಡೆದಿದ್ದಾರೆ. ಬಿಜೆಪಿಯ ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಅವರು, ಒಡಿಶಾದಲ್ಲಿ ಬಿಜೆಪಿ- ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ 2000-2002ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸ್ವತಂತ್ರ ಖಾತೆ ರಾಜ್ಯ ಸಚಿವೆಯಾಗಿದ್ದರು. 2002-2004ರವರೆಗೆ ಮೀನುಗಾರಿಗೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದರು. 2007ರಲ್ಲಿ ಒಡಿಶಾ ವಿಧಾನಸಭೆಯಿಂದ ಅತ್ಯುತ್ತಮ ಶಾಸಕಿ ನೀಲಕಂಠ ಪ್ರಶಸ್ತಿ ಪಡೆದುಕೊಂಡಿದ್ದರು. ಜಾರ್ಖಂಡ್ ನ ಮೊದಲ ಮಹಿಳಾ ರಾಜ್ಯಪಾಲರೆಂಬ ಹೆಗ್ಗಳಿಕೆಯ ಜತೆಗೆ ರಾಜ್ಯಪಾಲೆಯಾಗಿ ನೇಮಕವಾದ ಒಡಿಶಾದ ಮೊದಲ ಬುಡಕಟ್ಟು ನಾಯಕಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ದ್ರೌಪದಿ ಮುರ್ಮು ಅವರ ಜೀವನ ಸಾಲು ಸಾಲು ವೈಯಕ್ತಿಕ ದುರಂತಗಳಿಂದ ಗಾಸಿಗೊಳಗಾಗಿದೆ. ಅವರ ಒಬ್ಬ ಮಗ 2009ರಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಮಗ 2012ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಅವರ ಪತಿ ಶ್ಯಾಮ ಚರಣ್ ಮುರ್ಮು ಕೂಡ ಹೃದಯಾಘಾತದಿಂದ ನಿಧನರಾಗಿದ್ದರು. ಪ್ರಸ್ತುತ ಅವರಿಗೆ ಒಬ್ಬ ಮಗಳು ಇತಿಶ್ರೀ ಮಾತ್ರ ಇದ್ದಾರೆ. ಅವರು ಮದುವೆಯಾಗಿ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಯುಕೋ ಬ್ಯಾಂಕ್ ನಲ್ಲಿ ಇತಿಶ್ರೀ ಕೆಲಸ ಮಾಡುತ್ತಿದ್ದು, ಅವರ ಪತಿ ಗಣೇಶ್ ಹೆಂಬ್ರಮ್ ರಗ್ಬಿ ಆಟಗಾರರಾಗಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ದ್ರೌಪದಿ ಮುರ್ಮು ಅವರಿಗೆ ಝಡ್ + ಮಾದರಿಯ ಭದ್ರತೆಯನ್ನು ನೀಡಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಅವರಿಗೆ ಭದ್ರತೆ ನೀಡಲಾಗಿದೆ.
ದ್ರೌಪದಿ ಮುರ್ಮು ಇದೇ ತಿಂಗಳ 25ಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದೆ. ದ್ರೌಪದಿ ಆಯ್ಕೆಯಾದರೆ ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : – 40 ಶಿವಸೇನೆ ಶಾಸಕರು ನನ್ನ ಜೊತೆಗೇ ಇದ್ದು ಯಾರೂ ಪಕ್ಷ ತೊರೆಯುತ್ತಿಲ್ಲ- ಏಕನಾಥ್ ಶಿಂಧೆ